ದೇವರಹಿಪ್ಪರಗಿಯಲ್ಲಿ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ | ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇಶದಲ್ಲಿ ಶುಚಿತ್ವ ಹಾಗೂ ರುಚಿತ್ವ ಇರುವ ಏಕೈಕ ಭಾಷೆ ಕನ್ನಡವಾಗಿದೆ ಎಂದು ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವಶ್ರೀಗಳು ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.
ಕನ್ನಡ ಕೇವಲ ಆಡಳಿತ ಭಾಷೆಯಾಗಿರದೇ ಕಲಿಕಾಮಾರ್ಗವೂ ಆಗಿರಬೇಕು. ನಾವು ಕನ್ನಡ ಸಾಹಿತ್ಯದ ಶಕ್ತಿ ಅರಿಯಬೇಕಿದೆ. ಕನ್ನಡಕ್ಕಿರುವ ಶಕ್ತಿ ಯಾವ ಭಾಷೆಗೂ ಇಲ್ಲ. ಅದಕ್ಕಾಗಿ ಹೃದಯ ತಟ್ಟುವ, ಮುಟ್ಟುವ ಮಾತೃಭಾಷೆ ಕನ್ನಡವನ್ನು ಪ್ರೀತಿಸಿ, ಗೌರವಿಸಿ, ನಿತ್ಯ ಜೀವನದಿ ಅಳವಡಿಸಿಕೊಳ್ಳೊಣ. ಇಂಗ್ಲೀಷ ವ್ಯಾಮೋಹದಿಂದ ನಮ್ಮ ಮಕ್ಕಳನ್ನು ಹೊರಗೆ ತರೋಣ. ಕನ್ನಡ ಭಾಷೆಗೂ ಅಗಾಧ ಶಕ್ತಿಯಿದೆ ಅದನ್ನು ಜಗತ್ತಿಗೆ ತೋರಿಸುವ ಕಾಯಕವಾಗಬೇಕೆಂದರು.
ಇಂಡಿ ಉಪವಿಭಾಗಾಧಕಾರಿ ಅಬೀದ್ ಗದ್ಯಾಳ ಮಾತನಾಡಿ, ಕನ್ನಡ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಹೊಟ್ಟೆ ಹೊರೆಯುವ ಭಾಷೆಯಾಗಬೇಕು. ಹೃದಯವಂತಿಕೆಯಿಂದ ಕನ್ನಡ ಭಾಷೆ ಅರಿತರೆ ಯಶಸ್ಸು ಸಾಧ್ಯ. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಒಡನಾಟವಿರುವ ನಾವೆಲ್ಲ ಸೌಭಾಗ್ಯವಂತರು. ಕನ್ನಡವನ್ನು ಪ್ರೀತಿಸಿ, ಪೋಷಿಸೋಣ, ಕನ್ನಡದಲ್ಲಿಯೇ ವ್ಯವಹರಿಸೋಣ. ಕನ್ನಡಕ್ಕಾಗಿ ಶ್ರಮಿಸೋಣ ಎಂದರು.
ತಹಶೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ, ಕನ್ನಡ ಸೇವೆಗೆ ನಮ್ಮ ಸಹಕಾರ ಸದಾ ಇರುತ್ತದೆ. ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಕನ್ನಡಸೇವೆ ನಮ್ಮ ಆದ್ಯ ಕಾರ್ಯವಾಗಿದೆ. ಕನ್ನಡಕ್ಕಾಗಿ ಶ್ರಮಿಸಿದವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ನಮಗೆ ಬಾಳಿ ಬದುಕಲು ಕನ್ನಡತನವೊಂದಿದ್ದರೆ ಸಾಕು ಎಂದರು.
ಕೊಕಟನೂರಿನ ಗದ್ದುಗೆಮಠದ ಶ್ರೀಗಳು ಆಶೀರ್ವಚನ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶಿನಾಥ ತಳಕೇರಿ, ಅಭಿಷೇಕ ಚಕ್ರವರ್ತಿ ಮಾತನಾಡಿದರು.
ದೇವೂರ ಹಿರೇಮಠದ ಮರುಳರಾಧ್ಯ ಶಿವಾಚಾರ್ಯರು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ ಯಲಿಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಶಾಂತಯ್ಯ ಜಡಿಮಠ, ಬಶೀರ ಅಹಮ್ಮದ ಬೇಪಾರಿ, ಪ್ರಕಾಶ ಮಲ್ಹಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್.ಬೇವನೂರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಪಿ.ಎಸ್.ಮಿಂಚನಾಳ, ಎ.ಎಚ್.ವಾಲೀಕಾರ ಸೇರಿದಂತೆ ಮತ್ತೀತರರಿದ್ದರು.
ಇದೇ ಸಂದರ್ಭದಲ್ಲಿ ವೈದ್ಯರು, ವಿದ್ಯಾಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
ಸಿದ್ದು ಮೇಲಿನಮನಿ ಹಾಗೂ ಸಿದ್ದೇಶ್ವರ ಪ್ರೌಡಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ರೈತಗೀತೆ ಮೊಳಗಿತು.
ರಾಜಶೇಖರ ಕುಂಬಾರ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಎ.ಎ.ಕರಿಕಬ್ಬಿ ವಂದಿಸಿದರು.
ದೇವರಹಿಪ್ಪರಗಿ ಸಮಗ್ರ ಅಭಿವೃದ್ಧಿಯಾಗಲಿ :ಕೆರೆಪ್ಪಗೋಳ
ನಾನು ಬಡವ ಆದರೆ ಕನ್ನಡಭಾಷಾ ಅಭಿಮಾನಿಗಳು ಶ್ರೀಮಂತರಾಗಿದ್ದಾರೆ. ಸಾಹಿತ್ಯವೇ ನನಗೆ ಸಂಜೀವಿನಿ ನನಗೆ ನೀಡಿದ ಅಭೂತಪೂರ್ವ ಗೌರವ ಕನ್ನಡಿಗರಿಗೆ ಸಲ್ಲಬೇಕು ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ ನುಡಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಲಿ ಮಾಡುವವ ಸರ್ವಾಧ್ಯಕ್ಷ ನಾಗಿರುವುದು ನನ್ನ ಸೌಭಾಗ್ಯವೇ ಸರಿ. ನಿತ್ಯ ಕೂಲಿ ಮಾಡುತ್ತ ಸಾಹಿತ್ಯ ರಚನೆ ಮಾಡಿ ದಾನಿಗಳ ಸಹಕಾರದಿಂದ ಸುಮಾರು ೧೦ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡುವ ಸೌಭಾಗ್ಯ ನನ್ನದಾಗಿದೆ. ದೇವರಹಿಪ್ಪರಗಿಗೆ ತನ್ನದೆ ಆದ ಇತಿಹಾಸವಿದ್ದು, ಪುರಾತನ ಕಾಲದ ಕುರುಹುಗಳು ಇಲ್ಲಿವೆ. ಪಟ್ಟಣ ಐತಿಹ್ಯ ಸ್ಥಳಗಳೊಂದಿಗೆ ಧಾರ್ಮಿಕ ನೆಲಬೀಡಾಗಿದೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ನಾವು ನೀವೆಲ್ಲ ಶ್ರಮಿಸೋಣ. ದೇವರಹಿಪ್ಪರಗಿ ಪಟ್ಟಣ ಹಾಗೂ ತಾಲ್ಲೂಕು ಸಮಗ್ರ ಅಭಿವೃದ್ಧಿಯಾಗಬೇಕು. ತಾಲ್ಲೂಕು ಕೇಂದ್ರದಲ್ಲಿ ಬಹುತೇಕ ಕಚೇರಿ ಇಲ್ಲದಿರುವುದು ವಿಷಾಧನೀಯ. ಜೊತೆಯಲ್ಲಿ ಸರಕಾರಿ ಕನ್ನಡ ಪ್ರೌಡಶಾಲೆ ಪ್ರಾರಂಭಿಸಬೇಕು. ಸಾಹಿತಿಗಳಿಗೂ ಪಿಂಚಣಿ ನೀಡಬೇಕು. ದೇವರಹಿಪ್ಪರಗಿ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ನಿತ್ಯ ನಿರಂತರ ಪ್ರಾಮಾಣಿಕವಾಗಿ ಕನ್ನಡ ಸೇವೆ ನಡೆಯಬೇಕು ಎಂದು ಶಾಸಕರು ಹಾಗೂ ಸರಕಾರಕ್ಕೆ ಆಗ್ರಹಿಸಿದರು.

ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ
ಸಾಹಿತ್ಯ ಸಮ್ಮೇಳನಕ್ಕೂ ಮುಂಚೆ ಹೊಸನಗರದ ಟಿಪ್ಪು ಸುಲ್ತಾನ ವೃತ್ತದಿಂದ ಸಮ್ಮೇಳನದ ವೇದಿಕೆಯವರೆಗೆ ಸಾರೋಟದಲ್ಲಿ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಮಕ್ಕಳ ಶರಣರ, ಸಾಹಿತಿಗಳ ವೇಷಭೂಷಣಗಳು, ಡೊಳ್ಳು ಕುಣಿತ, ಹಲಗೆ ಮೇಳ, ಬೊಂಬೆಗಳು ನೋಡುಗರ ಗಮನ ಸೆಳೆದವು.

