ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೀದರ್ ಜಿಲ್ಲೆಯ ಪ್ರಥಮ ದರ್ಜೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ನೇತೃತ್ವದಲ್ಲಿ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಆತ್ಮಹತ್ಯೆಗೂ ಮುನ್ನ ಸಚಿನ್ ಪಾಂಚಾಲ್ ಅವರು ಬರೆದ ಏಳು ಪುಟಗಳ ಡೆತ್ ನೋಟವೂ ಕೂಡ ಲಭ್ಯವಾಗಿದೆ. ಆ ಡೆತ್ ನೋಟಲ್ಲಿ ಟೆಂಡರ್ ಕೊಡಿಸುವದಾಗಿ ಆರ್.ಡಿ.ಪಿ.ಆರ್ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಕಲಬುರ್ಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಹಾಗೂ ಇತರ 8 ಜನರು ಹಣಕ್ಕಾಗಿ ಪೀಡುಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದು ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಸಚಿನ್ ಅವರಿಗೆ ಟೆಂಡರ್ ಕೊಡಿಸುವದಾಗಿ ಹಣ ಕೂಡ ಪಡೆದಿದ್ದಾರೆ ಎನ್ನಲಾಗಿದೆ. ಟೆಂಡರ್ ಕೂಡ ಕೊಡಿಸಲಿಲ್ಲ ಹಾಗೂ ಹಣವೂ ವಾಪಸ್ ಕೊಡಲಿಲ್ಲ ಎಂದು ಗಂಭೀರ ಆರೋಪವಿದೆ. ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂದಿಸಿದಂತೆ ರಾಜು ಕಪನೂರ್ ತಮಗೆ ವಂಚನೆ ಮಾಡಿದ್ದಾರೆ ಹಾಗೂ ಜೊತೆಗೆ ದುಡ್ಡು ವಾಪಾಸು ಕೊಡು ಅಂತಾ ಕೇಳಿದರೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಚಿನ್ ಡೆತ್ ನೋಟ್ ನಲ್ಲಿ ತಿಳಿಸಿರುತ್ತಾರೆ ಎಂದು ಭೋಗೇಶ್ ಸೋಲಾಪುರ್ ಹೇಳಿದರು.
ಸಚಿನ್ ಅವರ ಸಹೋದರಿ ದೂರನ್ನು ಕೂಡ ಕೊಟ್ಟಿರುತ್ತಾರೆ. ದೂರು ಸ್ವೀಕರಿಸಲು ನಿರ್ಲಕ್ಷ್ಯ ವಹಿಸಿದ ಬೀದರ್ ನಗರದ ಇಬ್ಬರು ಹೆಡ್ ಕಾನ್ಸಟೇಬಲಗಳನ್ನು ಬೀದರ್ ಎಸ್ಪಿ ಅವರು ಅವರನ್ನ ಅಮಾನತು ಕೂಡ ಮಾಡಿರುತ್ತಾರೆ. ಪ್ರಕರಣ ದಾಖಲಿಸಿಕೊಳ್ಳುವ ವಿಚಾರದಲ್ಲಿ ಪೊಲೀಸರಿಂದ ಗಂಭೀರ ಲೋಪ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ನಂಟು ಇರುವುದರಿಂದ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಈ ತನಿಖೆಯಲ್ಲಿ ಸಚಿವರು ತನಿಖೆಯ ಮೇಲೆ ಪ್ರಭಾವ ಬೀರಬಹುದೆಂದು ಅನುಮಾನ ಕೂಡ ಇದೆ. ಆದ್ದರಿಂದ ಮುಖ್ಯಮಂತ್ರಿಗಳು ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ತಕ್ಷಣ ಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಮ್ ಆದ್ಮಿ ಪಕ್ಷ ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.

