ಉದಯರಶ್ಮಿ ದಿನಪತ್ರಿಕೆ
ಚಡಚಣ: ಅಮರಶಿಲ್ಪಿ ಜಕಣಾಚಾರಿ ಕಟ್ಟಿಗೆ,ಕಲ್ಲು ಬಂಡೆಗಳಿಂದ ತಾವು ತಯಾರಿಸಿದ ಶಿಲ್ಪ ಕಲೆಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಅಮರಶಿಲ್ಪಿ ಜಕಣಾಚಾರ್ಯರು ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ನಾಡಿನ ಅಲಂಕಾರ ಹೆಚ್ಚಿಸಿದ್ದಾರೆ.ಅವರ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಇರುವ ಕಲಾಕೃತಿಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಯಾತ್ರಿಕರು ಆಗಮಿಸುವಂತೆ ಮಾಡಿದ್ದಾರೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರಂತಹ ಶಿಲ್ಪಿ ಇನ್ನೂ ಯಾರೂ ಜನಿಸಿಲ್ಲ.ಕಲ್ಲಿನಲ್ಲಿ ಕಸೂತಿಮಾಡಿ ಕಲ್ಲರಳಿಸಿ ಹೂ ಮಾಡಿದ ಮಹಾನ್ ವ್ಯಕ್ತಿ.ಬೇಲೂರು, ಹಳೇಬೀಡು, ಹಂಪಿ,ಐಹೊಳೆ, ಪಟ್ಟದಕಲ್ಲು ಮುಂತಾದ ಅನೇಕ ಯಾತ್ರಾ ಸ್ಥಳಗಳಲ್ಲಿ ಅವರು ಶಿಲೆಯಲ್ಲಿ ಜೀವಂತಕಲೆ ನಿರ್ಮಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಹೊಸ ವರ್ಷವು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.ವಿದ್ಯಾಮಾತೆ ವಿದ್ಯಾ-ಬುದ್ಧಿ ಕರುಣಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಡಾ: ರಾಜಕುಮಾರ್ ಅಭಿಮಾನಿ ಸಂಘದ ತಾಲೂಕಾಧ್ಯಕ್ಷ ಶಿವರಾಜ್ ಪಾತ್ರೋಟ ರಾಜಕುಮಾರ್ ಪರಿವಾರದ ಕ್ಯಾಲೆಂಡರ್ ಶಾಲೆಗೆ ನೀಡಿದರು.
ಸುರೇಖಾ ಝುಲ್ಪಿ ಪ್ರಾರ್ಥಿಸಿದರು. ಡಿ ಎಸ್ ಬಗಲಿ ಸ್ವಾಗತಿಸಿ ನಿರೂಪಿಸಿದರು.ಜಯಶ್ರೀ ಗೊಟ್ಯಾಳ ವಂದಿಸಿದರು.
ಶಿಕ್ಷಕರಾದ ಮಹಾದೇವ ಆದಿಗೊಂಡೆ, ಎಚ್ ಜೆ ಲೋಣಿ, ಎಂ ಎಸ್ ನಿಂಬಾಳಕರ, ವ್ಹಿ ಎಸ್ ಪತ್ತಾರ, ಅಪೇಕ್ಷಾ ಕರಜಗಿ, ಪ್ರೇಮಾ ಧೋತ್ರೆ ಹಾಗೂ ಅಡುಗೆ ಸೋದರಿಯರಾದ ಮಹಾನಂದಾ ಧೋತ್ರೆ,ಸಫೂರಾ ಲಟೋರಿ, ಕಸ್ತೂರಿ ಸಾಲಮಂಟಪ,ರಕಮಾ ವಾಘ್ಮೋರೆ ಹಾಗೂ ಮಕ್ಕಳು ಭಾಗವಹಿಸಿದ್ದರು.

