ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನದಲ್ಲಿ ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಆದರೆ ಗುರುವಿನ ಋಣ ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಎನ್ನುವುದನ್ನೇ ಶ್ರೀ ಸಿದ್ಧೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆಯನ್ನು ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿ ಆಚಾರಗಳಿಂದ ನಮ್ಮಲ್ಲಿ ಬದಲಾವಣೆ ತಂದಿರುವ ಅಪರೂಪದ ಸಂತ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕೇವಲ ಗುರುವಿನ ಸ್ಥಾನವನ್ನು ತುಂಬಿಲ್ಲ. ಅವರು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮ ಭೂಮಿ. ಹಾಗೇ ವಿಜಯಪುರ ಶ್ರೀ ಸಿದ್ಧೇಶ್ವರ ಶ್ರೀಗಳ ಕರ್ಮ ಭೂಮಿಯಾಗಿದೆ. ಈ ಭರತ ಭೂಮಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ರೂಪದಲ್ಲಿ ಸ್ವಾಮಿ ವಿವೇಕಾನಂದರನ್ನು ನಾವು ಮತ್ತೇ ಕಂಡಿದ್ದೇವೆ ಎಂದರು.
ಸನಾತನ ಧರ್ಮ, ನಾಡಿನ ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ರಾಯಬಾರಿಯಾಗಿ ನಾವು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಯಾವುದೇ ಬದಲಾವಣೆ ಪ್ರಾರಂಭವಾಗಬೇಕಾದರೆ ಅದು ನನ್ನಿಂದಲೇ ಆಗಲಿ ಎಂದು ಸರ್ವ ಸಂತರಿಗೂ ಮಾದರಿಯಾಗಿ ನಿಂತವರು ಪೂಜ್ಯರು.
ಯಾವುದನ್ನು ಸಮಾಜ ಒಪ್ಪಲ್ಲವೋ, ಅದನ್ನು ಆ ಭಗವಂತ ಕೂಡ ಒಪ್ಪಲು ಸಾಧ್ಯವಿಲ್ಲ. ಅದನ್ನೇ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳು ನಮಗೆಲ್ಲ ತಿಳಿಸಿದ್ದಾರೆ.
ಶರಣರಿಗೆ ಮರಣವೇ ಮಹಾನವಮಿ. ಶ್ರೀ ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿನಲ್ಲಿ ಆನಂದವನ್ನು ಕಂಡವರು. ಬದುಕಿನ ಅವಧಿಯನ್ನೇ ಸ್ವರ್ಗವನ್ನಾಗಿ ಮಾಡಿಕೊಂಡವರು. ಕುಳಿತುಕೋಳ್ಳುವ ಜಾಗ ಮುಖ್ಯವಲ್ಲ. ನಾವು ಏನು ಮಾಡುತ್ತೇವೆ. ನಾವು ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ೧೨ ನೇ ಶತಮಾನದ ಅಣ್ಣ ಬಸವಣ್ಣನವರ ತದ್ರೂಪಿಯಾಗಿ ನಾವು ಶ್ರೀ ಸಿದ್ಧೇಶ್ವರ ಅಪ್ಪಾವರನ್ನು ನೋಡಿದ್ದೇವೆ. ಅವಿಭಜಿತ ವಿಜಯಪುರ ಜಿಲ್ಲೆಯ ಬಗ್ಗೆ ಅಪ್ಪಗಳ ಕನಸು ಬಹಳ ದೊಡ್ಡದು. ಎಲ್ಲ ಪಾಟೀಲರು ಸುದ್ದ ಆದರೆ ವಿಜಯಪುರ ಸುದ್ದ ಆಗ್ತದ ಎಂದು ಅಪ್ಪಗಳು ಹೇಳಿದ್ದರು. ಅವರು ಪ್ರಾಂಜಲ ಮನಸ್ಸಿನಿಂದ ನುಡಿದ ಮಾತುಗಳು ನಮ್ಮ ಹೃದಯದಲ್ಲಿ ಉಳಿದಿವೆ. ಅವರು ನಮ್ಮ ಮನಸ್ಸಿನಲ್ಲಿಯೇ ವಾಸವಾಗಿದ್ದಾರೆ. ಅವರು ಸೂಚಿಸಿರುವ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಬಸವಲಿಂಗ ಸ್ವಾಮೀಜಿಗಳು ಶ್ರೀ ಸಿದ್ಧೇಶ್ವರ ಅಪ್ಪಗಳ ನಡೆಸಿಕೊಟ್ಟಂತ ಮಾರ್ಗದಲ್ಲಿ ಆಶ್ರಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನಾಡಿನ ಅನೇಕ ಪೂಜ್ಯರು ಹೆಗಲು ಕೊಟ್ಟಿದ್ದಾರೆ. ಶ್ರೀ ಸಿದ್ಧೇಶ್ವರ ಅಪ್ಪಗಳನ್ನು ಕಂಡಿರುವ ವಿಜಯಪುರ-ಬಾಗಲಕೋಟ ಜನ ನಾವು ಬಹಳ ಪುಣ್ಯವಂತರು. ಪೂಜ್ಯರು ಈ ಶತಮಾನದ ಶ್ರೇಷ್ಠ ಸಂತರು. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲಿದೆ ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಳಾದ ಪೂಜ್ಯ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎ.ಎಸ್.ಪಾಶ್ಚಾಪುರೆ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ನಾಡಿನ ಮಠಾಧೀಶರು, ಸ್ವಾಮೀಜಿಗಳು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಉಪಸ್ಥಿತರಿದ್ದರು.

ವಿಜಯಪುರ: ದೇಶದಲ್ಲಿ ಸೇವೆ, ಪ್ರೀತಿ, ಆತ್ಮೀಯತೆ ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವು ಸಿದ್ಧೇಶ್ವರ ಅಪ್ಪಾವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಮಾಜಿ ಶಾಸಕ ಹಾಗೂ ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಡಿ.ಆರ್.ಪಾಟೀಲ ಹೇಳಿದರು.
ನಗರದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳವರ ಗುರುನಮನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಿ ಸಿದ್ಧೇಶ್ವರ ಅಪ್ಪನವರು ನಮ್ಮ ಹೃದಯದಲ್ಲಿ ವಾಸವಾಗಿದ್ದಾರೆ. ಅಪ್ಪಾವರು ಹಳ್ಳಿಗಳನ್ನು ಸ್ವಚ್ಛವಾಗಿಡುವುದರ ಬಗ್ಗೆ ಒತ್ತಿ ಹೇಳುತ್ತಿದ್ದರು. ನಾವು ಹಳ್ಳಿಯ ಸೊಬಗನ್ನು ಕಾಪಾಡಿಕೊಳ್ಳಲು ಸ್ವಚ್ಛವಾಗಿಸುವ ಕೆಲಸ ಮಾಡಬೇಕು. ಪೂಜ್ಯರು ತಮ್ಮ ನಡೆನುಡಿಗಳಿಂದ ನಮ್ಮ ಮೇಲೆ ಪ್ರಭಾವ ಬೀರಿ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಅವರಿಂದಾಗಿ ನನ್ನೊಳಗೆ ಬಹಳಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.

“ಶ್ರೀ ಸಿದ್ಧೇಶ್ವರ ಅಪ್ಪಗಳು ಈ ನಾಡಿಗೆ ಸರಳತೆಯನ್ನು ರೂಡಿಸಿದ್ದಾರೆ. ಅವರ ಪ್ರವಚನಗಳಲ್ಲಿ ನಮಗೆ ಸಾಕಷ್ಟು ಜ್ಞಾನವನ್ನು ಹಂಚಿದ್ದಾರೆ. ಅಪ್ಪಾವರ ಆಶೀರ್ವಾದಿಂದ ನನಗೆ ಬಹಳಷ್ಟು ಒಳ್ಳೆಯದು ಆಗಿದೆ. ಅಪ್ಪಗಳು ಸದಾ ನನ್ನ ಮನಸ್ಸಿನಲ್ಲಿ ವಾಸವಾಗಿದ್ದಾರೆ. ನಾವು ಅವರ ಹೇಳಿಕೊಟ್ಟು ಮಾರ್ಗದಲ್ಲಿ ಬದುಕಬೇಕು.”
– ರಮೇಶ ಜಿಗಜಿಣಗಿ
ಸಂಸದರು, ವಿಜಯಪುರ

” ಶ್ರೀ ಸಿದ್ಧೇಶ್ವರ ಶ್ರೀಗಳು ಜೀವಿಸಿದ ಅವಧಿಯಲ್ಲಿ ನಾವು ಬದುಕಿರುವುದು ನಮ್ಮ ಪುಣ್ಯ. ಭಾರತದಲ್ಲಿ ಸಾಕಷ್ಟು ಸಂತರು ಮಾಂತರು ಜೀವಿಸಿ ಹೋಗಿದ್ದಾರೆ. ಅವರಲ್ಲಿ ಅತ್ಯಂತ ಶ್ರೇಷ್ಠರಾದವರು ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು. ಪೂಜ್ಯರು ನುಡಿದಂತೆ ನಡೆದರು, ನಡೆದಂತೆ ನುಡಿದರು ಮಾತೃಹೃದಯಿಯಾಗಿ ಸರ್ವರನ್ನು ಸಮಾನವಾಗಿ ಕಂಡರು. ಲೌಕಿಕವಾಗಿ ಯಾವುದೇ ವಸ್ತುವಿನ ಮೇಲೆ ವ್ಯಾಮೋಹ ಇರಲಿಲ್ಲ. ಒಬ್ಬ ಸನ್ಯಾಸಿ ಹೇಗಿರಬೇಕು ಎನ್ನುವುದನ್ನು ನಮ್ಮಗಳಿಗೆ ತೋರಿಸಿಕೊಟ್ಟು ಹೋಗಿದ್ದಾರೆ. ಅವರ ದಾರಿಯಲ್ಲಿಯೇ ನಾವು ನಡೆಯಬೇಕು.”
– ಜಯರಾಜೇಂದ್ರ ಮಹಾಸ್ವಾಮೀಜಿ
ಸುತ್ತೂರು ಮಠ

“ನಾವು ನಮ್ಮ ಊರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೆಣ್ಣು ಮಕ್ಕಳಿಗಾಗಿ, ತಾಯಂದಿರಿಗಾಗಿ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಬೇಕು. ಊರಿಗೊಂದು ಶ್ರೀ ಸಿದ್ಧೇಶ್ವರ ಅಪ್ಪಗಳ ಹೆಸರಿನ ವನಗಳನ್ನು ನಿರ್ಮಾಣ ಮಾಡಬೇಕು. ಅಪ್ಪಗಳು ಬೇಗ ಮಲಗಿ, ಬೇಗ ಏಳುತ್ತಿದ್ದರು. ಕೆಲವು ಸಲ ತಡವಾಗಿ ಮಲಗಿದರೂ ಸಹಿತ ಬೇಗ ಏಳುತ್ತಿದ್ದರು. ನಾವು ಅದನ್ನು ರೂಡಿಸಿಕೊಳ್ಳಬೇಕು.” ಭಗವದ್ಗೀತೆಯ ೭೦೦ ಶ್ಲೋಕಗಳನ್ನು ತೆಗೆದುಕೊಂಡರೆ, ವಚನಗಳನ್ನು ತೆಗೆದುಕೊಂಡರೆ ಅದರಲ್ಲಿ ಹೊಂದಾಣಿಕೆಯಾಗುವುದು ಕೇವಲ ಸಿದ್ಧೇಶ್ವರರು.”
– ಕಾಡಸಿದ್ಧೇಶ್ವರ ಮಹಾಸ್ವಾಮೀಜಿ
ಕಣ್ಣೇರಿ ಮಠ

“೧೨ ನೇ ಶತಮಾನದ ಅಲ್ಲಮಪ್ರಭು, ಚನ್ನಬಸವಣ್ಣನವರ ಪ್ರತಿರೂಪವಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ೨೧ನೇ ಶತಮಾನದಲ್ಲಿ ಜ್ಞಾನ ಹಂಚಿದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಶ್ರೀಗಳು ಅತ್ಯಂತ ದಯಾಳು, ಅಂತಃಕರಣ ಮೂರ್ತಿಯಾಗಿದ್ದರು.”
– ಬಸವಲಿಂಗ ಪಟ್ಟದೇವರು
ಭಾಲ್ಕಿ

