ಎಕ್ಸಲಂಟ್ ವಿಜ್ಞಾನ ಪ.ಪೂ.ಕಾಲೇಜಿನಲ್ಲಿ ಗುರುನಮನ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಾಶ್ಚಾತ್ಯ ಜೀವನ ಶೈಲಿ ಎಡೆಗೆ ಮಾರು ಹೋಗುತ್ತಿರುವ ಯುವ ಸಮೂಹಕ್ಕೆ ಭಾರತೀಯತೆಯನ್ನು ತಿಳಿಸಿಕೊಡುವ ಮೂಲಕ ಸಂಸ್ಕಾರವಂತ ಭಾರತ ನಿರ್ಮಾಣ ಮಾಡಲು ಹೊರಟ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಾರ್ಯ ಶ್ಲಾಘನೀಯ ಮಾತ್ರವಲ್ಲ ಇತರರಿಗೆ ಮಾದರಿಯಾಗಿದೆ. ಇದಕ್ಕೆ ಕಾರಣೀಕರ್ತರಾಗಿರುವ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅಭಿನಂದನಾರ್ಹರು ಎಂದು ವಾಗ್ಮಿ ಅಶೋಕ ಹಂಚಲಿ ಹೇಳಿದರು.
ಬುಧವಾರ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರು ನಮನ ಮೊಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು; ಇಂದು ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಕ್ಕಳು ಜನೆವರಿ ಬಂತೆಂದರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈ ಮರೆಯಲು ಮುಂದಾಗುತ್ತಾರೆ. ಆದರೆ ಎಕ್ಸಲಂಟ್ ಕಾಲೇಜು ಅಡ್ಡ ದಾರಿಯಲ್ಲಿ ಹೋಗುವ ಯುವ ಸಮೂಹವನ್ನು ಸರಿದಾರಿಗೆ ತರುವ ಕಾರ್ಯ ನಾವು ಮಾಡುತ್ತೇವೆ ಎನ್ನುವಂತೆ ಗುರು ನಮನ ಮಹೋತ್ಸವ ಆಯೋಜನೆ ಮಾಡಿ, ನಡೆದಾಡುವ ದೇವರು ಹಾಗೂ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಆದರ್ಶಮಯ ಬದುಕಿನ ಕುರಿತು ಬೋಧಿಸುವುದರ ಜೊತೆಗೆ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆಯ ಹಾಗೂ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳ ಮೌಲ್ಯವನ್ನು ತಿಳಿಸಿಕೊಡುವ ಕಾರ್ಯ ಮಾಡಿದ್ದು ಆದರ್ಶಪ್ರಾಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ, ಬದುಕನ್ನೆ ಬದಲಿಸಬಲ್ಲ ಚಿಂತನೆಗಳನ್ನು ಶ್ರವಣ ಮಾಡುವ ಮೂಲಕ ವರ್ಷಾಚರಣೆ ಮಾಡುವುದು ಅತ್ಯುತ್ತಮವಾದ ಮಾರ್ಗವಾಗಿದೆ. ಅದರಲ್ಲೂ ಸಿದ್ಧೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮವನ್ನೇ ಕ್ಯಾಲೆಂಡರ್ ವರ್ಷದ ಮೊದಲ ದಿನ ಮಾಡುವ ಮೂಲಕ ಪೂಜ್ಯರ ಚಿಂತನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ವಾಡಿಕೆಯನ್ನು ಎಕ್ಸಲಂಟ್ ಸಂಸ್ಥೆ ಕಳೆದ ವರ್ಷದಿಂದ ಹಾಕಿ ಕೊಂಡಿದೆ. ಇದರಿಂದ ಮಕ್ಕಳು ಪ್ರಭಾವಿತರಾಗಿ ಪಾಶ್ಚಾತ್ಯ ಮತ್ತಿನಿಂದ ಹೊರ ಬಂದು ಭಾರತೀಯತೆಯ ಬದುಕಿಗೆ ತೆರೆದುಕೊಳ್ಳುತ್ತಾರೆನ್ನುವ ನಂಬಿಕೆ ನಮಗಿದ್ದು, ಇಂಥ ಕಾರ್ಯಕ್ರಮಗಳ ಅವಶ್ಯಕತೆ ಬಹಳ ಇದೆ ಎಂದು ಹೇಳಿದರು.
ಉತ್ನಾಳದ ನಿವೃತ್ತ ಆದರ್ಶ ಶಿಕ್ಷಕ ಚಂದ್ರಶೇಖರಯ್ಯ ರೇ. ಹಿರೇಮಠ ಸಾನಿಧ್ಯ ವಹಿಸಿದ್ದರು.
ಭುವನೇಶ್ವರಿ ಕೋರವಾರ, ಡಾ.ಸವಿತಾ ಬಿರಾದಾರ, ಭಗವದ್ಗೀತಾ ಪಠಣ ಮಾಡಿದರು. ಆಕ್ಸಫರ್ಡಶಾಲೆಯ ಶಿಕ್ಷಕಿ ಸುಜಾತಾ ಹ್ಯಾಳದ ಕವನ ವಾಚಿಸಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪುಷ್ಪಾ ಕೌಲಗಿ, ಮಹಿಳಾ ವಿ.ವಿಯ ಪ್ರಧ್ಯಾಪಕ ಡಾ.ಬಾಬು ಲಮಾಣಿ, ಮಹಾಂತೇಶ ಹತ್ತರಕಾಳ, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಶರಣಗೌಡ ಪಾಟೀಲ ಹಾಗೂ ರಮೇಶ ಬಾಗೆವಾಡಿ ನಿರೂಪಿಸಿದರು.
ವಿಜಯಪುರದ ಸ್ವಯಂಭೋ ಕಲಾತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನಗೊಂಡಿತು.

