ನಾಳೆ ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಹಾಗೂ ಕಾಲೇಜು ಆವರಣದಲ್ಲಿ ಆರಂಭಗೊಳ್ಳಲಿದೆ.
ಶುಕ್ರವಾರ ಬೆಳಿಗ್ಗೆ ೮.೦೦ ಕ್ಕೆ ಧ್ವಜಾರೋಹಣ ಸಮಾರಂಭದೊಂದಿಗೆ ಆರಂಭಗೊಳ್ಳಲಿರುವ ಸಮ್ಮೇಳನದ ಪ್ರಧಾನ ವೇದಿಕೆಗೆ ಮಡಿವಾಳ ಮಾಚಿದೇವರು, ಮುಖ್ಯ ಮಹಾದ್ವಾರಕ್ಕೆ ಮೊಹರೆ ಹಣಮಂತ್ರಾಯ, ದಾಸೋಹಮನೆಗೆ ನಟಕೇಸರಿ ಸಿದ್ರಾಮಪ್ಪ ಹಂದಿಗನೂರ ಹಾಗೂ ಪುಸ್ತಕ ಮಳಿಗೆಗೆ ಕೇಶಿರಾಜ ಎಂದು ನಾಮಕರಣ ಮಾಡಲಾಗಿದೆ.
ಬೆಳಿಗ್ಗೆ ೮.೩೦ ಕ್ಕೆ ವೈವಿಧ್ಯಮಯ ಕಲಾ ತಂಡಗಳೊಂದಿಗೆ ಮಡಿವಾಳ ಮಾಚಿದೇವರ ದೇವಸ್ಥಾನದಿಂದ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದವರೆಗೆ ಸಮ್ಮೇಳಾನಾಧ್ಯಕ್ಷ ಸಾಹಿತಿ ಸಂಗಮೇಶ ಕೆರೆಪ್ಪಗೋಳ ಅವರ ಮೆರವಣಿಗೆ ಜರುಗಲಿದೆ. ನಂತರ ೧೦.೦೦ ಘಂ.ಗೆ ಶ್ರೀಮಡಿವಾಳ ಮಾಚಿದೇವರ ಮುಖ್ಯ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ ಜರುಗಲಿದೆ. ನಂತರ ಕರ್ನಾಟಕ ಸುವರ್ಣ ಸಂಭ್ರಮ ೫೦ರ ನಿಮಿತ್ತ ದೇವರಹಿಪ್ಪರಗಿ ತಾಲ್ಲೂಕು ಸಾಹಿತ್ಯ ಪರಿಷತ್ತಿನಿಂದ ಗೌರವ ಸನ್ಮಾನ ಜರುಗಲಿದೆ.
ಮಧ್ಯಾಹ್ನ ೧೨.೩೦ ಕ್ಕೆ ಜರುಗುವ ಶರಣ ಗೋಷ್ಠಿಯಲ್ಲಿ ಮಡಿವಾಳ ಮಾಚಿದೇವರ ಕುರಿತು ಶ್ರೀಧರ ಆಸಂಗಿಹಾಳ ಹಾಗೂ ಮೊಹರೆ ಹಣಮಂತ್ರಾಯರ ಜೀವನ ಚರಿತ್ರೆಯ ಕುರಿತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್,ಬಸವರೆಡ್ಡಿ ಉಪನ್ಯಾಸ ನೀಡಲಿದಾರೆ. ನಂತರ ೨.೩೦ ಕ್ಕೆ ಕವಿಗೋಷ್ಠಿ ಆರಂಭಗೊಳ್ಳಲಿದೆ. ಇದರಲ್ಲಿ ೨೮ ಕ್ಕೂ ಹೆಚ್ಚು ಕವನಗಳ ವಾಚನ ನಡೆಯಲಿದೆ.
ಸಾಯಂಕಾಲ ೪.೩೦ಕ್ಕೆ ಜರುಗುವ ೩ನೇ ಗೋಷ್ಠಿಯಲ್ಲಿ ಜಾನಪದ ಸಂಭ್ರಮ ಮತ್ತು ಬಂಡಾಯ ಸಾಹಿತ್ಯ ಕುರಿತು ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಹಾಗೂ ಸಾಹಿತಿ ಅಶೋಕ ಹಂಚಲಿ ಅವರಿಂದ ಉಪನ್ಯಾಸ ಜರುಗಲಿದೆ. ನಂತರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪದಾಧಿಕಾರಿಗಳ ಬಹಿರಂಗ ಅಧಿವೇಶನ ನಡೆಯಲಿದೆ.
ಸಂಜೆ ೭.೩೦ಕ್ಕೆ ಸಮಾರೋಪ ಸಮಾರಂಭ ನಂತರ ೮.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮ್ಮೇಳನದ ಎಲ್ಲ ಗೋಷ್ಠಿಗಳು ಹಾಗೂ ಸಮಗ್ರ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಸಹಿತ ತಾಲ್ಲೂಕಿನ ವಿವಿಧ ಮಠಗಳ ಮಠಾಧೀಶರು, ರಾಜಕೀಯ ಧುರೀಣರು, ಯುವಸಾಹಿತಿಗಳು, ವೈದ್ಯರು, ತಾಲ್ಲೂಕಿನ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ಸಮುದಾಯ, ಮಾಧ್ಯಮ ಮಿತ್ರರು, ಉದ್ಯಮಿಗಳು ಸೇರಿದಂತೆ ತಾಲ್ಲೂಕಿನ ವಿವಿಧ ಎಲ್ಲ ಇಲಾಖೆಗಳ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆ ತಿಳಿಸಿದೆ.

