ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವದಲ್ಲಿ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸಿದ್ಧೇಶ್ವರ ಶ್ರಿಗಳು ಒರ್ವ ವ್ಯಕ್ತಿ ಅಲ್ಲ, ಅವರೊಬ್ಬ ದಾರ್ಶನಿಕ ಶಕ್ತಿ. ಅವರೊಬ್ಬ ದೈವಿರೂಪವಾಗಿದ್ದರು ಎಂದು ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ “ಗುರುದೇವರ ಬದುಕು” ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾವು ತಾಯಿ ಗರ್ಭದಲ್ಲಿ ಇದ್ದಾಗಲೇ ಹುಟ್ಟು ಸಾವಿನ ಬಗ್ಗೆ ಚರ್ಚೆ ನಡೆಯುತ್ತದೆ. ಹಣ ಆಸ್ತಿಗಳು, ಸಂಪತ್ತು ನಮ್ಮ ಜೀವನದಲ್ಲಿ ಬಹು ಮುಖ್ಯ ಎಂದು ಭಾವಿಸುತ್ತೇವೆ. ಹಾಗೆ ಭಾವಿಸಿದರೆ ನಾವು ಸಂತೋಷವನ್ನು ಕಾಣಲು ಸಾಧ್ಯವಿಲ್ಲ. ನಾವು ಸಾವನ್ನು ಗಂಭಿರವಾಗಿ ಪರಿಗಣಿಸಿದರೆ ಬದುಕನ್ನು ಕೂಡ ಗಂಭಿರವಾಗಿ ಪರಿಗಣಿಸುತ್ತೇವೆ ಸಿದ್ಧೇಶ್ವರ ಶ್ರೀಗಳ ವಿಚಾರಧಾರೆಗಳು ಅತ್ಯಂತ ವಿಶಾಲವಾಗಿದ್ದವು. ಅವರು ಸಾವಿನೊಂದಿಗೆ ಸಂವಾದ ನಡೆಸಿದವರು, ಸಾವನ್ನು ಸ್ವಾಗತಿಸಿದವರು. ಈ ಬಗೆಯ ಚಿಂತನೆ ನಮ್ಮ ಬದುಕನ್ನು ಅರ್ಥಪುರ್ಣವಾಗಿಸುತ್ತದೆ ಎಂದರು.
ಬದುಕಿನ ಅಂತಿಮ ಅವಧಿಯಲ್ಲಿ ವ್ಯಕ್ತಿ ಸಾವಿನ ಆಚೆಗೆ ನೋಡಲು ಪ್ರಯತ್ನಿಸುತ್ತಾನೆ. ಆಚಾರ-ವಿಚಾರಗಳ ಬಗ್ಗೆ ಯೋಚಿಸುತ್ತಾನೆ. ಸಾವು ಅದು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿರುವ ಎಳೆಯಾಗಿದೆ. ಆ ಭಯವನ್ನೇ ಆತ್ಮಶಕ್ತಿಯನ್ನಾಗಿ ಬಳಸಿಕೊಳ್ಳಬೇಕು ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ಅದರಂತೆ ಸಾವು ನಮ್ಮೊಡನೆ ಹೆಜ್ಜೆ ಹಾಕುತ್ತದೆ. ನಮಗೆ ಗೊತ್ತಾಗುವುದಿಲ್ಲ. ಬಾಲ್ಯ ಕಳೆದು ಹೋಗುತ್ತದೆ ಅದು ಬಾಲ್ಯದ ಸಾವು. ಯವೌನ ಬರುತ್ತದೆ ಅದು ಮುಗಿಯುತ್ತಿದ್ದಂತೆ ಅದು ಅಂತ್ಯವಾಗಿ ಸಾಯುತ್ತದೆ. ವೃದ್ಧಾಪ್ಯ ಬರುತ್ತದೆ ಅದು ಕೂಡಾ ಅಂತ್ಯವಾಗುತ್ತದೆ. ಹೀಗೆ ಸಾವು ನಿರಂತರ ಪ್ರಕ್ರಿಯೇ. ಅದು ನಿರಂತರವಾಗಿ ನಡೆಯುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ. ನಮ್ಮ ಜೋತೆಯಲ್ಲಿಯೇ ಇರುವ ಸಾವಿಗೆ ಹೆದುರುವ ಅವಶ್ಯಕತೆ ಇಲ್ಲ. ನಾವು ಬದುಕಿನ ಕೆಟ್ಟ ಘಟನೆಗಳನ್ನು ಎದುರಿಸಿದರೆ ಸಾವು ಗೆದ್ದಂತೆ ಎಂದು ಹೇಳಿದರು.
ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಮಹಸ್ವಾಮಿಗಳು ಆಶೀರ್ವಚನ ನೀಡಿ, ಕೆಲವು ವ್ಯಕ್ತಿಗಳ ಬಗ್ಗೆ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವಷ್ಟು ಪದಗಳಿಗೆ ಶಕ್ತಿ ಇಲ್ಲ. ಅಂತಹ ವ್ಯಕ್ತಿತ್ವ ನಮ್ಮ ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ತರಗಿ-ಇಳಕಲ್ಲ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀಸಿದ್ಧೇಶ್ವರ ಅಪ್ಪಗಳು ನಿತ್ಯ ಸತ್ಯವನ್ನೇ ನುಡಿದರು. ಅವರು ಬದುಕಿ ಬಾಳಿದ ಕಾಲದಲ್ಲಿ ನಾವು ಇದ್ದೇವೆ ಎನ್ನುವುದೇ ಧನ್ಯ. ಪರಮ ಪೂಜ್ಯ ಶ್ರೀಗಳು ಅಹಿಂಸಾ ತತ್ವವನ್ನು ತಮ್ಮ ಜೀವನದೂದ್ದಕ್ಕೂ ಅಳವಡಿಸಿಕೊಂಡು ಬಂದಂತವರು. ಎಂದಿಗೂ ಯಾರ ಮನಸ್ಸಿಗೂ ಗಾಯವಾಗದಂತೆ ತಮ್ಮ ಜೀವನದುದ್ದಕ್ಕೂ ಬದುಕಿದರು. ಅವರೊಂದಿಗೆ ಯಾರಾದರೂ ಮಾತನಾಡುತ್ತಿದ್ದರೆ ಅವರಿಗೆ ಶ್ರೀ ಸಾಕ್ಷಾತ ಪರಮಾತ್ಮನ ಜೊತೆ ಮಾತನಾಡಿದಂತೆ ಭಾಸವಾಗುತ್ತಿತ್ತು. ಗುರುಗಳು ಪ್ರತಿಕ್ಷಣವೂ ಜನತೆಯ ಉದ್ಧಾರಕ್ಕಾಗಿ ಬದುಕಿದವರು. ಅವರ ಬದುಕು ಎಂತೆಂದರೆ ಅದು ಅರಿವಿನ ಬದುಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ವಿವಿಧ ಮಠಾಧೀಶರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಸಿದ್ಧೇಶ್ವರ ಶ್ರೀಗಳ ಚಿಂತನೆಗಳಿಗೆ ಸಾವಿಲ್ಲ
ವಿಜಯಪುರ: ಶ್ರೀ ಸಿದ್ಧೇಶ್ವರ ಶ್ರೀಗಳ ನಡೆ ನುಡಿ ಇಡೀ ಜಗತ್ತೇ ಮೆಚ್ಚುವಂತದ್ದು. ನಮ್ಮ ಜೀವನದಲ್ಲಿ ಒಬ್ಬ ನಿಜವಾದ ಸಂತನನ್ನ ನಾವು ನೋಡಿದ್ದೇವೆ ಎಂತಾದರೆ ಅವರು ಶ್ರೀ ಸಿದ್ಧೇಶ್ವರ ಶ್ರೀಗಳು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬುಧವಾರ ಸಿದ್ದೇಶ್ವರ ಶ್ರೀಗಳ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಅವರ ಅಗಲಿಕೆಯಿಂದ ಸಮಾಜ ಬಳಷ್ಟನ್ನು ಕಳೆದುಕೊಂಡಿದೆ ಆದರೆ ಅವರು ಕಟ್ಟಿಕೊಟ್ಟ ಜೀವನದ ಸಾರ, ಅವರು ತಿಳಿಸಿದ ಬದುಕಿನ ಅರ್ಥ ಇವೆಲ್ಲವು ನಮ್ಮ ಜೊತೆಗೆ ಇವೆ. ಅವರ ಚಿಂತನೆಗಳಿಗೆ ಸಾವಿಲ್ಲ. ಅವರು ನಮ್ಮೊಳಗೆ ಸದಾ ಅಮರರಾಗಿ ಉಳಿದಂತಹ ಮಹಾನ್ ಚೇತನ ಶ್ರೀಗಳು ಎಂದು ಸಚಿವ ಶಿವಾನಂದ ಹೇಳಿದರು.

“ಶ್ರೀ ಸಿದ್ಧೇಶ್ವರ ಶ್ರೀಗಳು ಜ್ಞಾನಯೋಗಿಯಾಗಿ ಇಡೀ ಜಗತ್ತಿಗೆ ಸತತ ೬೫ ವರ್ಷಗಳ ಕಾಲ ಜ್ಞಾನದಾಸೋಹ ಮಾಡಿದರು. ಅವರ ಬದುಕೆ ಮಾದರಿ. ಇಡೀ ಬದುಕಿನೂದ್ದಕ್ಕೂ ಅತ್ಯಂತ ಸರಳತೆಯಿಂದ ಬದುಕಿ ಬಯಲಲಲ್ಲಿ ಬಯಲಾಗಿ ಹೋದಂತವರು. ಈ ಗದ್ದಲಿನ ಜಗತ್ತಿನಲ್ಲಿ ಸದ್ದಿಲ್ಲದೆ ಸಾಗಿ ಎಲ್ಲರಿಗೂ ಬೆಳಕಾಗಿ ಯಾರಿಗೂ ನೂವು ಮಾಡದಂತ ಬದುಕಿ ನಮ್ಮ ಬದುಕಿಗೆ ಚೇತನವಾದಂತವರು.”
– ಬಸವಲಿಂಗ ಮಹಾಸ್ವಾಮೀಜಿ
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳು, ವಿಜಯಪುರ

