ಸಿಂದಗಿಯಲ್ಲಿ ಪಾದಯಾತ್ರೆ | ಮನೆ ಮನೆಗೆ ತೆರಳಿ ಮತಯಾಚನೆ
ವಿಜಯಪುರ: ಕಾಂಗ್ರೆಸ್ ಪಕ್ಷದ ಸಿಂದಗಿ ಮತಕ್ಷೇತ್ರದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಗೆಲುವಿಗೆ ಅವರ ಸ್ನೇಹಿತರ ಬಳಗ ಟೊಂಕಕಟ್ಟಿ ನಿಂತಿದೆ.
ಈ ಬಾರಿ ಸ್ನೇಹಿತ ಅಶೋಕ ಮನಗೂಳಿ ಅವರ ಗೆಲುವನ್ನು ಯಾರಿಂದಲೂ ತಪ್ಪಿಸಲಿಕ್ಕಾಗುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿರುವ ಅವರ ಗೆಳೆಯರ ಬಳಗ ಅವರ ಗೆಲುವಿಗಾಗಿ ಪಣತೊಟ್ಟಿದೆ. ಅದಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದೆ.
ಸೋಮವಾರ ಅಶೋಕ ಮನಗೂಳಿ ಅವರ ಸ್ನೇಹಿತರಾದ ಉಮೇಶ ಜೋಗೂರ, ಸಂಗಯ್ಯ ಮಠ, ಚನ್ನು ಪಟ್ಟಣಶೆಟ್ಟಿ, ವಿಶ್ವನಾಥ ಕಮತಗಿ, ಮುತ್ತು ಮುಂಡೇವಾಡಗಿ, ಸುನೀಲ ಹಳ್ಳೂರ, ರಾಜು ಕುಚಬಾಳ, ಪ್ರಕಾಶ ಗುಣಾರಿ ಸೇರಿದಂತೆ ಹಲವು ಸ್ನೇಹಿತರು ಪಟ್ಟಣದ ವಾರ್ಡುಗಳಲ್ಲಿ ಪಾದಯಾತ್ರೆ ಕೈಗೊಂಡು ಮನೆ ಮನೆಗ ತೆರಳಿ ಮತ ಯಾಚಿಸಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಶೊಕ ಮನಗೂಳಿ ಅವರ ಆಪ್ತ ಸ್ನೇಹಿತರಾದ ಉಮೇಶ ಜೋಗೂರ, ಸಂಗಯ್ಯ ಮಠ, ಚನ್ನು ಪಟ್ಟಣಶೆಟ್ಟಿ ಅವರು, ಸ್ನೇಹಿತ ಅಶೋಕ ಮನಗೂಳಿ ಅವರ ಕುರಿತು ಪಟ್ಟಣದ ಮತದಾರರು ಅಭಿಮಾನ ಹೊಂದಿದವರಾಗಿದ್ದಾರೆ. ಅವರ ತಂದೆ ಮಾಜಿ ಸಚಿವ ದಿ.ಎಂ.ಸಿ. ಮನಗೂಳಿ ಅವರು ಸಿಂದಗಿಯ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳನ್ನು ಜನತೆ ಮರೆತಿಲ್ಲ. ಸದಾ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸಿಂದಗಿಯಲ್ಲಿ ಬೃಹತ್ ಕೆರೆ ನಿರ್ಮಾಣ ಮಾಡಿದ್ದಲ್ಲದೇ ಬಳಗಾನೂರ ಕೆರೆಯಿಂದ ಪೈಪಲೈನ್ ಮೂಲಕ ಕೆರೆಗೆ ನಿರಂತರ ನೀರು ಪೂರೈಕೆಗೆ ಯೋಜನೆ ರೂಪಿಸಿದ ಶ್ರೇಯ ಅವರದು. ಪಟ್ಟಣದಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ದಿ||ಎಂ.ಸಿ.ಮನಗೂಳಿ ಅವರ ಮೇಲಿನ ಸಿಂದಗಿ ಜನತೆಯ ಅಭಿಮಾನ ಅವರ ಸುಪುತ್ರ ಅಶೋಕ ಮನಗೂಳಿಯವರಿಗೆ ಮತ ನೀಡುವ ಮೂಲಕ ತೋರ್ಪಡಿಸಲಿದ್ದಾರೆ. ಸರ್ವ ಜನಾಂಗವನ್ನು ಪ್ರೀತಿಸುವ, ಜಾತ್ಯಾತೀತ ಮನೋಭಾವದ ಅಶೋಕ ಮನಗೂಳಿ ಅವರ ವ್ಯಕ್ತಿತ್ವ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರೀಯ ಯೋಜನೆಗಳಿಂದಾಗಿ ಹಳ್ಳಿ ಹಳ್ಳಿಗಳಲ್ಲಿ ಯುವಕರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಸ್ನೇಹಿತ ಅಶೋಕ ಮನಗೂಳಿ ಅವರ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.