ಕಸಾಪದಲ್ಲಿ ಲಂಚಗುಳಿತನ, ಜಾತೀಯತೆ, ಪಕ್ಷಪಾತ ಮತ್ತು ಉತ್ತರ ಕರ್ನಾಟಕದ ಕವಿಗಳ ಸಾಹಿತ್ಯ-ಸಂಸ್ಕೃತಿಯ ನಿರ್ಲಕ್ಷ್ಯದ ಆರೋಪ
ಉದಯರಶ್ಮಿ ದಿನಪತ್ರಿಕೆ
– ಡಾ ಶಶಿಕಾಂತ ಪಟ್ಟಣ, ರಾಮದುರ್ಗ
ರಾಮದುರ್ಗ: ಸಾಹಿತ್ಯವೆನ್ನುವುದು ಒಂದು ಸೃಜನಶೀಲ ಮನಸ್ಸಿನ ಸುಂದರ ಅಭಿವ್ಯಕ್ತಿ. ಇದಕ್ಕೆಂದೇ ಕನ್ನಡ ಕವಿಗಳು ಸಾಹಿತಿಗಳು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸಹಾಯದಿಂದ ಕನ್ನಡ ಸಾಹಿತ್ಯ ಪರಿಷತ್ತ್ ಆರಂಭಿಸಿದರು . ಬ್ರಿಟಿಷರ ಕಾಲದಲ್ಲಿ ಕನ್ನಡ ಪರ ಜನಪರ ಸಮಾಜಮುಖಿ ಕಾರ್ಯದ ಪ್ರಬಲ ಮಾಧ್ಯಮವೇ ಸಾಹಿತ್ಯ .
ಭಾರತದ ಸ್ವಾತಂತ್ರ್ಯ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯದ ಪಾತ್ರ ಬಹು ದೊಡ್ಡದು. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಗೋಕಾಕ ಮುಂತಾದ ಬಹು ದೊಡ್ಡ ದೈತ್ಯ ಪ್ರತಿಭೆಗಳ ಕನ್ನಡ ಸಾಹಿತ್ಯ ಸಮ್ಮೇಳನಗಳು ಇತ್ತೀಚೆಗೆ ಅರ್ಥ ಕಳೆದು ಕೊಳ್ಳುತ್ತಿವೆ.
ಅದಕ್ಕೆ ಮುಖ್ಯ ಕಾರಣಗಳು ಲಂಚಗುಳಿತನ ಜಾತೀಯತೆ ಪಕ್ಷಪಾತ ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಕವಿಗಳ ಸಾಹಿತ್ಯ ಸಂಸ್ಕೃತಿಯ ಸಂಪೂರ್ಣ ನಿರ್ಲಕ್ಷ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫).
ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.’ ಮಾನವ ಕುಲ ತಾನೊಂದೇ ವಲಂ’ ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)
ನಡುಗನ್ನಡ
ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ.

ವಚನ ಸಾಹಿತ್ಯ
ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.
ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೧ -೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ). ಇವರಲ್ಲದೆ ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
ಸಾಹಿತ್ಯ ಸಮ್ಮೇಳನಗಳು ಎಲ್ಲ ಹಿರಿಯ ಕಿರಿಯ ಸಾಹಿತಿಗಳ ಒಮ್ಮನಸ್ಸಿನ ಸಮ್ಮೇಳನವಾಗಲಿ ಎಲ್ಲಿಯೂ ಅಪಸ್ವರ ಬರಬಾರದು .
ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸರ್ ಇತ್ತ ಗಮನ ಹರಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆ ಎಚ್ಚರವಾಗಬೇಕು.

ಭ್ರಷ್ಟಾಚಾರದ ಬಗ್ಗೆ ಡಾ.ಜೋಶಿ ಉತ್ತರಿಸಲಿ
ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇತ್ತೀಚಿಗೆ ಜಗದೀಶ ಕೊಪ್ಪ ಅವರು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಕಾಂಡ ಭ್ರಷ್ಟಾಚಾರದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇದಕ್ಕೆ ನಾಡೋಜ ಡಾ.ಮಹೇಶ ಜೋಶಿ ಅವರು ಉತ್ತರಿಸಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನ ತಾಲೂಕ ಸಾಹಿತ್ಯ ಸಮ್ಮೇಳನ ಕೇಂದ್ರ ಸಾಹಿತ್ಯ ಸಮ್ಮೇಳನಗಳು ಕೇವಲ ಒಂದು ಜಾತ್ರೆ ರಾಜಕಾರಣಿಗಳ ಸಾಹಿತಿಗಳ ಸಂಭ್ರಮವನ್ನು ಹೊರೆತು ಪಡಿಸಿದರೆ ಕ್ರಿಯಾಶೀಲ ಕಾರ್ಯ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಮ್ಯಾಗಜಿನ್ ಮುಚ್ಚಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕೊಠಡಿ ಮತ್ತು ಕಟ್ಟಡಗಳ ಆಂತರಿಕ ವಿನ್ಯಾಸಕ್ಕೆ ದುಡ್ಡು ಸುರಿಯುವುದು ಸಾಹಿತ್ಯ ಸಮ್ಮೇಳನಗಳ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವುದು ಯಾವ ಪುರುಷಾರ್ಥಕ್ಕೆ. ?
ರಾಜಕಾರಣಿಗಳು ಸಮ್ಮೇಳನಕ್ಕೆ ಹತ್ತಾರು ಕೋಟಿ ದುಡ್ಡು ಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ದೊಡ್ಡ ಪ್ರಮಾಣದ ಲಂಚಗುಳಿತನ ನಡೆದಿದೆ ಎಂಬ ಆರೋಪ ಕೇಳಿ ಬರುತ್ತದೆ. ಪ್ರಗತಿಪರ ಚಿಂತಕರು ಸಾಹಿತಿಗಳು ಏಕೆ ಮೌನವಾಗಿದ್ದಾರೆ?
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅವರು ನಡೆಸುವ ಸಮ್ಮೇಳನಗಳು ಕೇವಲ ಸಾಹಿತ್ಯ ಪರಿಷತ್ತಿನ ಸದಸ್ಯರಿಗಷ್ಟೇ ಸೀಮಿತವಲ್ಲ. ಕಾರಣ ಸಾರ್ವಜನಿಕರ ತೆರಿಗೆಯ ದುಡ್ಡನ್ನೇ ಸಾಹಿತ್ಯ ಸಮ್ಮೇಳನಕ್ಕೆ ಕೊಡುತ್ತಾರೆ. ಹೀಗಾಗಿ ಪಾರದರ್ಶಕತೆ ಮುಖ್ಯ. ದುಡ್ಡು ಕೊಳ್ಳೆ ಹೊಡೆಯಲು ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದು ಬೇಡ.
ಸರ್ವಾಧಿಕಾರ ಖಂಡನೀಯ
ಜಯ ಭಾರತ ಜನನಿಯ ತನುಜಾತೆ ಎಂದು ಹಾಡಿದ ಕುವೆಂಪು ಅವರ ಈ ಗೀತೆಯ ಗೌರವ ಕಾಪಾಡುವ ಕಾರ್ಯ ನಮ್ಮೆಲ್ಲರ ಕರ್ತವ್ಯವಾಗಲಿ. ಸಾಹಿತ್ಯ ಸಮ್ಮೇಳನದ ಅವ್ಯವಹಾರದ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ಅವರನ್ನು ಅವರ ಸದಸ್ಯತ್ವವನ್ನು ಕಸಾಪದಿಂದ ವಜಾಗೊಳಿಸುವ ಸರ್ವಾಧಿಕಾರ ನಿಜಕ್ಕೂ ಖಂಡನೀಯ.
ನೆಲ-ಜಲ-ಸಂಸ್ಕೃತಿಯ ರಕ್ಷಣೆಗೆ ಮುಂದಾಗಲಿ
ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ, ಕಾವೇರಿಯ ನದಿ ನೀರಿನ ಹಂಚಿಕೆಯ ವಿಷಯ ಕೇಂದ್ರ ಸರಕಾರದ ಮಲತಾಯಿ ಧೋರಣೆ ಕಸಾಪಕ್ಕೆ ಸಂಬಧವಿಲ್ಲವೇ ? ಅಕ್ರಮ ಗಣಿಕಾರಿಕೆ, ಪ್ರಾದೇಶಿಕ ಅಸಮತೋಲನ ,ಕನ್ನಡಿಗರ ನಿರುದ್ಯೋಗ ಸಮಸ್ಯೆ, ಡಾ.ನಂಜುಂಡಪ್ಪ ವರದಿ, ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಎಲ್ಲಿಯವರೆಗೆ ಬಂದಿವೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೆ ನೆಲ, ಜಲ, ಸಂಸ್ಕೃತಿಯ ಸಂರಕ್ಷಣೆಗೆ ಮುಂದಾಗಬೇಕು.

