ದಾವಣಗೆರೆ ದಕ್ಷಿಣ – ಬಾಗಲಕೋಟೆ ಉಪಚುನಾವಣೆ ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ | ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!
ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಾಮಾನ್ಯವಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು, ಆದರೆ ಬುಧವಾರ ನಡೆದ ಶಾಸಕಾಂಗ ಸಭೆ ವಿಭಿನ್ನವಾಗಿತ್ತು.
ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಚರ್ಚಿಸಲಾಯಿತು, ಕಾಂಗ್ರೆಸ್ ನಾಯಕರ ಚರ್ಚೆ ಹೋಟೆಲ್ ಕೊಠಡಿಯನ್ನು ವಾರ್ ರೂಂ ಆಗಿ ಬದಲಾಯಿಸಿತ್ತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆಯನ್ನು ಉಪ ಚುನಾವಣೆಯಲ್ಲಿ ಹೇಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಪ್ರಾರಂಭಿಸಿದರು. ಎನ್‌ಡಿಎ (ಬಿಜೆಪಿ-ಜೆಡಿಎಸ್) ವಿರುದ್ಧ “ಒಗ್ಗಟ್ಟಾಗಿ” ಹೋರಾಡಬೇಕು ಇಲ್ಲದಿದ್ದರೇ ಕ್ಷೇತ್ರಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.
ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲವನ್ನೂ ಬಿಟ್ಟು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಹೋಗಲು ಯಾರು ಸಿದ್ಧರಿದ್ದಾರೆ ಎಂದು ಸುರ್ಜೇವಾಲಾ ಶಾಸಕರ ಬಳಿ ಕೇಳಿದಾಗ ಬಹುತೇಕ ಎಲ್ಲರೂ ಕೈ ಎತ್ತಿದರು. ಸರಿ ಹಾಗಾದರೆ ನೀವೆಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ.

ಬಾಗಲಕೋಟೆ: ಸೋತರೆ ಕಾಂಗ್ರೆಸ್ ಗೆ ಮುಖಭಂಗ
2018 ರಲ್ಲಿ ಚಾಮುಂಡೇಶ್ವರಿ ಸೋಲಿನ ನಂತರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸಿಎಂ ಗೆಲ್ಲಲು ಸಹಾಯ ಮಾಡಿದ್ದರಿಂದ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಪಣತೊಟ್ಟಿದೆ. ಎಚ್‌ವೈ ಮೇಟಿ ಗೌರವಾನ್ವಿತ ಕುರುಬ ನಾಯಕರಾಗಿದ್ದರು ಮತ್ತು ಈ ಸ್ಥಾನವನ್ನು ಕಳೆದುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವುದು ಖಚಿತ. ಬಾಗಲಕೋಟೆಯಲ್ಲಿ ಬಿಜೆಪಿ ಪ್ರಬಲ ಪ್ರದರ್ಶನ ನೀಡುತ್ತಿರುವಂತೆ ತೋರುತ್ತಿದೆ .ಏಕೆಂದರೆ ಅಲ್ಲಿ ಕಾಂಗ್ರೆಸ್ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ಹೋರಾಟದ ಅವಕಾಶವಿದೆ.

