ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಕೇಂದ್ರ ಸರ್ಕಾರ ಪಿಂಚಣಿ ಮಸೂದೆ ಜಾರಿಗೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ದಿನಾಚರಣೆಯ ಆಚರಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಬುಧವಾರ ತಹಸೀಲ್ದಾರ ಮೂಲಕ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸುವ ಮುನ್ನ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಸಭೆ ನಡೆಸಿದ ಅವರು ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಆರ್.ಜಿ.ಅಳ್ಳಗಿ, ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ತಾಲೂಕು ಕಾರ್ಯದರ್ಶಿ ಎಸ್.ಕೆ.ಸೋಮನಕಟ್ಟಿ ಮಾತನಾಡಿ, ಕೇಂದ್ರ ಸರ್ಕಾರವು ಪಿಂಚಣಿದಾರರನ್ನು ವರ್ಗೀಕರಿಸುವ ಮತ್ತು ಪಿಂಚಣಿ ವ್ಯತ್ಯಾಸಗಳನ್ನು ಕಾಯ್ದುಕೊಳ್ಳುವ ವಿವಾದಾತ್ಮಕ ಕ್ರಮವನ್ನು ಜಾರಿಗೆ ತಂದಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ. ಈ ಕಾಯ್ದೆಯ ಜಾರಿಯಿಂದಾಗಿ ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಪಿಂಚಣಿದಾರರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೇಂದ್ರವೇತನ ಆಯೋಗದ ಶಿಫಾರಸುಗಳ ಪ್ರಯೋಜನಗಳು ಹಳೆಯ ಪಿಂಚಣಿದಾರರಿಗೆ ಸಿಗದೆ ಹೋಗುವ ಆತಂಕವಿದೆ. ಇದು ಸಂವಿಧಾನಾತ್ಮಕವಾಗಿ ದೊರೆತಿರುವ ನ್ಯಾಯಯುತ ಹಕ್ಕುಗಳ ಉಲ್ಲಂಘನೆಯಾಗಿದೆ. ಪಿಂಚಣಿ ಎಂಬುದು ಸಾಮಾಜಿಕ ಕಲ್ಯಾಣ ಕ್ರಮವಾಗಿದ್ದು. ಅದು ನಿವೃತ್ತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ ಎಂಬ ನ್ಯಾಯಾಲಯದ ಆದೇಶಕ್ಕೆ ಈಗಿನ ಕೇಂದ್ರ ಸರ್ಕಾರದ ಧೋರಣೆ ವಿರುದ್ಧವಾಗಿದೆ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯುವಂತೆ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ
ಮನವಿ ಸಲ್ಲಿಸಲಾಗುತ್ತಿದೆ ಎಂದರು. ಶಿರಸ್ತೇದಾರ ಎ.ಎಚ್. ಬಳೂರಗಿ ಅವರು ಮನವಿ ಪತ್ರವನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಎಸ್. ಜಿ.ಮೋಖಾಸಿ, ಎಸ್.ಎ.ದೇಗಿನಾಳ, ಎಸ್. ಬಿ.ಪಾಟೀಲ, ಶರಣಪ್ಪ ಮಾದರ, ಎಂ.ಎಸ್. ಪತ್ತಾರ, ಎಸ್.ಎಲ್.ಓಂಕಾರ, ಕೃಷ್ಣಾ ಬಡಿಗೇರ, ಎಂ.ಜಿ ಆದಿಗೊಂಡ,ಎಸ್.ಎಸ್.ಹಿಟ್ನಳ್ಳಿ, ಎಸ್.ಜಿ.ಪಾಟೀಲ, ಎನ್.ಎನ್.ಹೊಸಮನಿ, ಎಸ್. ಬಿ. ಬಸೆಟ್ಟಿ, ಎಲ್.ಎನ್.ನಾಯಕೋಡಿ, ಕೆ.ಎ.ಮುಲ್ಲಾ, ಎಸ್.ಜಿ.ಹಾದಿಮನಿ,ವೈ.ಎಸ್. ಶಿವಣಗಿ, ಎಚ್.ಎಂ. ನಧಾಪ ಸೇರಿದಂತೆ ಇತರರು ಭಾಗವಹಿಸಿದ್ದರು.

