ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಚಿವ ಸಂಪುಟ ಸಭೆಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಸರಗೂರು: ಅವಳಿ ತಾಲೂಕಿನ ಜನ ಎದುರಿಸುತ್ತಿರುವ ಸಮಸ್ಯೆಗಳ ವಾಸ್ತವಾಂಶ ಗೊತ್ತಾಗಬೇಕಾದರೆ, ರಾಜ್ಯ ಸರ್ಕಾರ, ಕಾಡಂಚಿನ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಸಿ ಅವರು ಮನವಿ ಮಾಡಿದರು.
ಅರಣ್ಯ ಇಲಾಖೆ ಮತ್ತು ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಹಳೆಹೆಗ್ಗೂಡಿಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಜನ-ಜಾನುವಾರುಗಳ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹುಲಿ ದಾಳಿ ಬಳಿಕ ಹಳೆಹೆಗ್ಗೂಡಿಲು ಗ್ರಾಮದ ಜನರು ಭಯಭೀತರಾಗಿದ್ದಾರೆ. ಆವೇಶದಲ್ಲಿ ಸಣ್ಣ ತಪ್ಪು ಮಾಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ರೈತರನ್ನು ಕ್ಷಮಿಸಿ, ಅವರ ಮೇಲೆ ದಾಖಲಿಸಿರುವ ಪ್ರಕರಣವನ್ನು ಸರ್ಕಾರ ಹಿಂಪಡೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಶಾಸಕರು, ಸಚಿವರು, ಸರ್ಕಾರದ ಮೇಲೆ ಒತ್ತಡ ಏರಿ, ಸಚಿವ ಸಂಪುಟ ಸಭೆಯಲ್ಲಿ ಕೇಸ್ ಹಿಂಪಡೆಯುವಂತೆ ಮಾಡಬೇಕು ಎಂದು ಚಂದನ್ ಗೌಡ ಮನವಿ ಮಾಡಿದರು.
ಮುಳುಗಡೆ ಪ್ರದೇಶದ ಇಲ್ಲಿನ ಜನ ಕಳೆದ 40-50 ವರ್ಷಗಳಿಂದಲೂ ಅರಣ್ಯ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಸಾಗುವಳಿ ಪತ್ರ ಪಡೆಯಲು ಸಾಧ್ಯವಾಗಿಲ್ಲ. ಈಗಲಾದರೂ ಈ ಎರಡು ಇಲಾಖೆಗಳು, ಜಂಟಿ ಸರ್ವೇ ಕಾರ್ಯ ಕೈಬಿಟ್ಟು, ರೈತರಿಗೆ ಸಾಗುವಳಿ ಪತ್ರ ಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರ ಮಾತನಾಡಿ, ಹುಲಿ ಅಥವಾ ಆನೆಗಳ ದಾಳಿಯನ್ನು ಒಂದು ಪ್ರಾಕೃತಿಕ ವಿಕೋಪ ಎಂದು ಭಾವಿಸಬೇಕೋ ಹೊರತು, ಕೋಪದಲ್ಲಿ, ಆವೇಶದಲ್ಲಿ ಯಾರು ಕೂಡ ಕಾನೂನು ಕೈಗೆತ್ತಿಕೊಂಡು ಅಶಾಂತಿ ಉಂಟುಮಾಡಬಾರದು. ಈ ಹಿಂದೆಯೂ ಕೂಡ ಅರಣ್ಯದಲ್ಲಿ ಆದಿವಾಸಿಗಳು ವಾಸ ಮಾಡುತ್ತಿದ್ದರು. ವನ್ಯಪ್ರಾಣಿಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ವನ್ಯಜೀವಿಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಅವುಗಳ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ವಾಸನೆ ಸೇರಿದಂತೆ ಶಬ್ದದಿಂದಲೇ ಕಾಡುಪ್ರಾಣಿಗಳ ಸುಳಿವು ತಿಳಿದುಕೊಂಡು ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿದ್ದರು. ಅದೇ ರೀತಿ ಕಾಡಂಚಿನ ಭಾಗದಲ್ಲಿ ವಾಸಿಸುವ ಜನ ಮುನ್ನಚ್ಚರಿಕೆ ವಹಿಸಬೇಕು. ಅರಣ್ಯ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬರ ಹೊಣೆಗಾರಿಕೆ ಕೂಡ ಹೌದು. ಅರಣ್ಯ ಇದ್ದರೆ ನಾವು, ನೀವು. ಇಲ್ಲದಿದ್ದರೆ ಅಸಮತೋಲನ ಉಂಟಾಗಿ ಅನಾಹುತ ಸಂಭವಿಸುತ್ತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಗೂರು ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್, ಹಾರ್ಟ್ ಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಸಂಯೋಜಕ ಶಿವಲಿಂಗ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರದೀಪ್ ಕುಮಾರ್, ಅರ್ಪಿತಾ, ಯಜಮಾನರಾದ ಚುಂಚನಾಯಕ, ಗೋವಿಂದರಾಜು, ಭಲ್ಲೇಗೌಡ, ಗ್ರಾ.ಪಂ. ಮಾಜಿ ಸದಸ್ಯರಾದ ಮಹದೇವನಾಯಕ, ಸೋಮಣ್ಣ, ಗಡಿ ಯಜಮಾನರಾದ ಚೆನ್ನನಾಯಕ, ರೈತ ಕಲ್ಯಾಣ ಸಂಘದ ಸರಗೂರು ತಾಲೂಕು ಕಾರ್ಯದರ್ಶಿ ಬೈರ್ಯನಾಯಕ, ಯುವ ರೈತ ಮುಖಂಡ ನವೀನ್ ಕುಮಾರ್, ಗ್ರಾಮಸ್ಥರಾದ ಹೆಚ್ ಎನ್ ಚೆನ್ನನಾಯಕ, ಹೆಚ್ ಎಂ ಶಿವಪ್ಪ, ಸೋಮಣ್ಣ, ಶಂಕರ, ಸಿದ್ದಪ್ಪಾಜಿ, ಭೋಗಯ್ಯ, ಹನುಮಯ್ಯ ಸೇರಿದಂತೆ ರೈತ ಕಲ್ಯಾಣ ಸಂಘದ ತಾಲೂಕು ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಕಾಡಂಚಿನ ಭಾಗದಲ್ಲಿ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ತೆಗೆದುಕೊಂಡ ಕೆಲ ಮುಂಜಾಗ್ರತಾ ಕ್ರಮಗಳಿಂದ ಕಳೆದ ಮೂರು ತಿಂಗಳಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸರಗೂರು ವಲಯದ ತಲೆಬುರುಡೆಯಿಂದ 700 ಮೀಟರ್ ವರೆಗೆ ರೈಲ್ವೆ ಕಂಬಿ ಅಳವಡಿಕೆಗೆ ಅನುಮತಿ ಸಿಕ್ಕಿದೆ. ಇದರಿಂದ ನುಗು ಹಿನ್ನೀರಿನಿಂದ ಆನೆಗಳು ಬರುವುದು ಕಡಿಮೆಯಾಗಲಿದೆ.”
– ನಾರಾಯಣಸ್ವಾಮಿ
ಮೊಳೆಯೂರು ವಲಯ ಅರಣ್ಯಾಧಿಕಾರಿ
ರೈತರ ಮೇಲೆ ದಬ್ಬಾಳಿಕೆ
ಅರಣ್ಯ ಇಲಾಖೆಯಲ್ಲಿರುವ ರಾಮಾಂಜುನೆಯ ಎಂಬಾತ ನಮ್ಮ ಗ್ರಾಮದಲ್ಲಿ ನಡೆದಿರುವ ಘಟನೆ ಬಗ್ಗೆ ಮೂಗು ತೂರಿಸಿ ದಬ್ಬಾಳಿಕೆ ಮಾಡುತ್ತಿದ್ದಾನೆ. ಆತನಿಂದಲೇ ನಮ್ಮ ಗ್ರಾಮದ 40 ರೈತರ ಮೇಲೆ ಕೇಸ್ ದಾಖಲಾಗಿದೆ. ರೆಸಾರ್ಟ್ ವೊಂದರ ಜೊತೆ ಲಿಂಕ್ ಹೊಂದಿರುವ ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹಳೆಹೆಗ್ಗೂಡಿಲು ಗ್ರಾಮಸ್ಥರು ಎಸಿಎಫ್ ಸುಮಿತ್ರ ಅವರಿಗೆ ಮನವಿ ಮಾಡಿದರು.

