ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಗೌಡಗೆರೆ ಹಳ್ಳಿಯಲ್ಲಿ ಎದುರು -ಬದುರು ನಿಂತು ಕಾಳಗ ಮಾಡುವ ಮದಗಜಗಳ ಅಪರೂಪದ ಉಬ್ಬು ಶಿಲ್ಪ ಪತ್ತೆಯಾಗಿದ್ದು,ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಶಿಲ್ಪ ಪತ್ತೆಯಾಗಿದ್ದು,ಇದನ್ನು ಇತಿಹಾಸ ಸಂಶೋಧಕ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದಾರೆ.
ದೇವಗಿರಿ ಯಾದವರು ಎಂದು ಹೆಸರುವಾಸಿಯಾದ ಸೇವುಣರ ರಾಜ್ಯಧಾನಿ ಗೌಡಗೆರೆ ಹಳ್ಳಿಗೆ ಸೇರಿದ ಕೋಟೆಯಲ್ಲಿ ಕೆತ್ತಲಾದ ಮದಗಜಗಳ ಉಬ್ಬು ಶಿಲ್ಪವು ರಾಜಧಾನಿ ರಕ್ಷಣೆಗೆ ಶಕ್ತಿಶಾಲಿ ಗಜಪಡೆ, ಮತ್ತು ರಕ್ಷಣಾ ವ್ಯವಸ್ಥೆ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಎಂದು ಇತಿಹಾಸಕಾರ ಲಾಯಪ್ಪ ಇಂಗಳೆ ಅವರು ತಿಳಿಸಿದ್ದಾರೆ.
ಕ್ಷೇತ್ರಕಾರ್ಯದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಪ್ರಮುಖರಾದ ಬಸವರಾಜ ಕುಬಕಡ್ಡಿ, ಉಮೇಶ ಶಿವಶರಣ ಭೀಮರಾಯ ಕುಂಟೋಜಿ ಪ್ರಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.

