ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮೀಪದ ಅಸ್ಕಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಯೋಜನೆಯಡಿ ಮಂಜೂರಾಗಿದ್ದ ಮನೆಯನ್ನು ನಿರ್ಮಿಸಿ ಫಲಾನುಭವಿಯಾದ ಅಸ್ಕಿ ಗ್ರಾಮದ ಪ್ಯಾಟಿ ಈರಮ್ಮನವರಿಗೆ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯ್ಕ್ ಅವರು ಮಾತನಾಡಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಾದಾಯಕ ಕಾರ್ಯಕ್ರಮವಾದ ವಾತ್ಸಲ್ಯ ಮನೆ ರಚನೆ, ಮಾಸಾಶಾನ ಪಲಾನುಭವಿಗಳಿಗೆ, ನಿರ್ಗತಿಕರಿಗೆ, ಸೂರಿಲ್ಲದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪೂಜ್ಯರು ವಾತ್ಸಲ್ಯ ಮನೆ ರಚನೆ ಮಾಡುತ್ತಿದ್ದು, ಯೋಜನೆ ಅಡಿಯಲ್ಲಿ ಸುಮಾರು ೧೮೦೦೦ ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಾಶಾನ ಬರುತಿದ್ದು, ಸುಮಾರು ೮೦೦ ವಾತ್ಸಲ್ಯ ಮನೆ ರಚನೆ ಮಾಡಿದ್ದು ಪಲಾನುಭವಿಗಳು ನೆಮ್ಮದಿಯ ಜೀವನ ನಡೆಸಲು ಪೂಜ್ಯರು ದಾರಿಮಾಡಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಪೂಜ್ಯರು ಕೆರೆ ಹೂಳೆತ್ತುವುದು, ಸುಜ್ಞಾನ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರ ನೇಮಕಾತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದರು.
ಈ ವೇಳೆ ಕೆರೆ ಸಮಿತಿಯ ಅಧ್ಯಕ್ಷರಾದ ಜಲಪುರ ಸಿದ್ದನಗೌಡ ಬಸನಗೌಡ ಬಿರಾದಾರ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಅವಣ್ಣ ಬಿರಾದರ ಮಾತನಾಡಿ, ಸರ್ಕಾರ ಮಾಡದಂತಹ ಹಲವು ಯೋಜನೆಗಳನ್ನು ಪೂಜ್ಯರು ಜಾರಿಗೊಳಿಸುತ್ತಿದ್ದು, ಮಕ್ಕಳಿಲ್ಲದರಿಗೆ ನಿರ್ಗತಿಕರಿಗೆ ವಾತ್ಸಲ್ಯ ಅಂದರೆ ತಾಯಿಯ ಮಮತೆ, ಕರುಣೆಯ ಪ್ರತಿರೂಪವೇ “ವಾತ್ಸಲ್ಯಮನೆ” ಯಾಗಿದೆ. ಫಲಾನುಭವಿಗಳು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸುಂದರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಮತ್ತು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು, ಮಂಜುನಾಥ ಸ್ವಾಮಿ ಪೂಜ್ಯರಿಗೆ ಮತ್ತು ಅಮ್ಮನವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಬಿನೋಯಿ ಅವರು ಮಾತನಾಡಿದರು. ಸಂಗನಗೌಡ ವನಕಿಹಾಳ ಎಸ್‌ಡಿಎಮ್‌ಸಿ ಅಧ್ಯಕ್ಷರು, ಸಿ.ಎಮ್.ಟಕ್ಕಳಕಿ ಪಿಕೆಪಿಎಸ್ ಮಾಜಿ ಅಧ್ಯಕ್ಷರು, ವಿಶ್ವನಾಥ ಕಾಶಿನಾಥ ತಳವಾರ ಬಿಜಾಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಅಯ್ಯಪ್ಪ ಮುಗುಳಿ ಗ್ರಾಪಂ ಸದಸ್ಯರು, ರೇವಣಸಿದ್ಧ ಕವಡಿಮಠ ಗ್ರಾಪಂ ಸದಸ್ಯರು, ಗಣ್ಯರಾದ ಶಾಂತಯ್ಯ ಚನ್ನಬಸಯ್ಯ ಹಿರೇಮಠ, ಎಂ.ಕೆ.ಇಂಚಗೇರಿ, ರೇವಣಸಿದ್ದಪ್ಪ ಹಂಚಲಿ, ಬಾಲಪ್ಪಗೌಡ ಬಿರಾದಾರ, ಬಸವರಾಜ ಪಡಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ ಮೇಡಂ, ರಿಕವರಿ ಮೇಲ್ವಿಚಾರಕರಾದ ಹನುಮಂತ, ತಾಲೂಕು ಲೆಕ್ಕ ಪರಿಶೋಧಕರಾದ ಘನರಾಜ್, ವಲಯ ಮೇಲ್ವಿಚಾರಕರಾದ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿ ನೀಲಮ್ಮ, ವ್ಹಿಎಲ್‌ಇ ಸೇವಾದಾರರಾದ ನಿರ್ಮಲ, ಶ್ರೀದೇವಿ ಸುವಿಧಾ ಸಹಾಯಕರು ಸೇರಿದಂತೆ ಇತರರು ಇದ್ದರು.

