ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಖ್ಯಾತ್ ನಾಟಕಕಾರ ವಿಲಿಯಂ ಶೇಕ್ಸಪೀಯರ್ ರಂಗಭೂಮಿ ಎಂದರೆ ಕೇವಲ ಸ್ಥಳವಲ್ಲ, ಅದೊಂದು ಅನುಭವ, ಮನುಷ್ಯ-ಮನುಷ್ಯನಾಗಿ ಬದುಕುವುದನ್ನು ಕಲಿಯುವ, ಹಂಚಿಕೊಳ್ಳುವ ಶ್ರೇಷ್ಠ ಕಲೆಯಾಗಿದೆ” ಎಂದು ಹೇಳಿದ್ದಾರೆ.
ನಮ್ಮ ದೇಶೀಯ ನಾಟಕ, ರಂಗಭೂಮಿ, ನೃತ್ಯ, ಸಂಗೀತ ಮತ್ತು ಇತರ ಲಲಿತ ಕಲೆಗಳನ್ನು ಪ್ರೋತ್ಸಾಹಿಸುವುದು ಮತ್ತು ಆ ಎಲ್ಲ ಕಲೆಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಅಷ್ಟೇ ಅಲ್ಲದೇ ಇಂದಿನ ಡಿಜಿಟಲ್ ಯುಗದಲ್ಲಿ ಲೈವ ಪ್ರದರ್ಶನ ನೀಡುವ ಕಾರ್ಯಕ್ರಮಗಳ ಕುರಿತು ನೆನಪಿಸುವುದು, ಮಹತ್ವವನ್ನು ತಿಳಿಸುವದು ಮತ್ತು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ದೇಶೀಯ ನಾಟಕದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವುದು ಇದರ ಮುಖ್ಯ ಆಶಯವಾಗಿದೆ.ಈ ದಿನದಂದು ಪ್ರಪಂಚದಾದ್ಯಂತ ವಿವಿಧ ನಾಟಕೋತ್ಸವ ಮತ್ತು ರಂಗ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಮಹತ್ವದ್ದಾಗಿದೆ.
ವಿಶ್ವ ರಂಗಭೂಮಿ ದಿನದ ಆಚರಣೆಯ ಉದ್ಧೇಶ
೧೯೬೧ ರಲ್ಲಿ ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ ಮಾರ್ಚ ೨೭ ರಂದು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಸಲು ಕರೆ ಕೊಟ್ಟಿತು. ಮನರಂಜನೆಯ ಮತ್ತು ನೈಜ ಕಲೆಯನ್ನು ಅಭಿವ್ಯಕ್ತಿಗೊಳಿಸುವ ಜಾನಪದ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕೆಂಬ ಮಹೋನ್ನತ ಉದ್ಧೇಶದಿಂದ ಪ್ರವರ್ಷ ಮಾರ್ಚ ೨೭ ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮೋಬೈಲ್ ಸಂಸ್ಕೃತಿ ಬಂದಾಗಿನಿಂದಲೂ ನಮ್ಮ ಪುರಾತನ, ಸಾಂಪ್ರದಾಯಿಕ ಕಲೆ, ಸಾಹಿತ್ಯ, ರಂಗಭೂಮಿ, ಜಾನಪದ ಸಂಸ್ಕೃತಿಗಳು ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ವಿವಿಧತೆಯಲ್ಲಿ ಏಕತೆಯನ್ನು ಅಭಿವ್ಯಕ್ತಿಗೊಳಿಸುವ ನಮ್ಮ ದೇಶದ ಎಲ್ಲ ಕಲಾ ಪ್ರಕಾರಗಳನ್ನು ಪೋಷಿಸುವ ಕಾರ್ಯ ನಡೆಯಬೇಕಾಗಿದೆ. ಇಂದಿನ ಯುವ ಪೀಳಿಗೆಗೆ ನಾಟಕ, ರಂಗಭೂಮಿ ಕಲೆಗಳ ಬಗ್ಗೆ ಅರಿವು ಮೂಡಿಸಿ, ಆ ಕಲೆಗೆ ಸೂಕ್ತ ಬೆಲೆ ನೀಡಿ, ಗೌರವ ಕೊಟ್ಟು ಪೋಷಿಸುವದು ಇಂದಿನ ಅಗತ್ಯತೆಯಾಗಿದೆ.
ಸಾಮಾಜಿಕ ಜಾಗೃತಿ ಮತ್ತು ಮೌಲ್ವಿಕ ಸಂದೇಶ ನೀಡುವ ರಂಗಭೂಮಿ
ರಂಗಭೂಮಿಯಲ್ಲಿ ಮುಖ್ಯವಾಗಿ ವೃತ್ತಿ ರಂಗಭೂಮಿ ಕಲಾವಿದರು. ಹವ್ಯಾಸಿ ರಂಗಭೂಮಿ ಕಲಾವಿದರು ಎಂದು ಎರಡು ಪ್ರಕಾರಗಳಲ್ಲಿ ಕಾಣಬಹುದು. ಹಿಂದಿನ ಕಾಲದಲ್ಲಿ ಪ್ರತಿಯೊಂದು ಹಳ್ಳಿ-ಹಳ್ಳಿಯಲ್ಲಿ ವಿಶೇಷವಾದ ನಾಟಕ ಕಂಪನಿಗಳು ಇದ್ದವು. ನಮ್ಮ ಭವ್ಯ ಭಾರತದ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ರಾಮಾಯಣ, ಮಹಾಭಾರತ, ಶ್ರೀ ಕೃಷ್ಣ ಪಾರಿಜಾತ, ಪರಶುರಾಮ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಕವಿರತ್ನ ಕಾಳಿದಾಸ, ಬಸವೇಶ್ವರ, ಲವ-ಕುಶ, ಹೇಮರಡ್ಡಿ ಮಲ್ಲಮ್ಮ, ಸತಿ ಸಕ್ಕುಬಾಯಿ, ರೇಣುಕಾ ಯಲ್ಲಮ್ಮ, ಸಿಂಧೂರ ಲಕ್ಷ್ಮಣ, ಸಂಗ್ಯಾ-ಬಾಳ್ಯಾ ಮುಂತಾದ ಜಾನಪದ ನಾಟಕಗಳು ನಮ್ಮ ಹಳ್ಳಿ ಜೀವನದಲ್ಲಿ ಕಾಣಸಿಗುತ್ತಿದ್ದವು. ಹಳೆಯ ಕಾಲದ ನಾಟಕ-ರಂಗಭೂಮಿ ನಮಗೆಲ್ಲ ಸತ್ಯ-ನ್ಯಾಯ, ನಿಷ್ಠುರತೆ, ಪ್ರಾಮಾಣಿಕತೆ, ನಡೆ-ನುಡಿ, ದೇಶಪ್ರೇಮದಂತಹ ಮೌಲ್ವಿಕ ಸಂದೇಶ ನೀಡುತ್ತಿದ್ದವು. ಆದರೆ ನಾವು ಇಂದು ಪಾಶ್ಚಾತ್ಯ ಸಂಸ್ಕೃತಿ, ಚಲನಚಿತ್ರ, ಧಾರವಾಹಿ ಮತ್ತು ಮೋಬೈಲ್ ಎಂಬ ಮಾಯಾ ಜಾಲದಲ್ಲಿ ಸಿಲುಕಿ, ಟ್ರ್ಯಾಕ್ಟರ್ ಅಶ್ಲೀಲ ಹಾಡು, ಮಿಕ್ಸಿಂಗ್-ಡಬ್ಬಿಂಗ್ ಮತ್ತು ಅರ್ಥಹೀನ ಮತ್ತು ದ್ವಂದ್ವಾರ್ಥಕ್ಕೆ (ಡಬಲ್‌ಮೀನಿಂಗ್) ಎಡೆಮಾಡಿಕೊಡುತ್ತ ಸಿನೇಮಾ, ನಾಟಕ ಮತ್ತು ಚಲನಚಿತ್ರ ಗೀತೆಗಳ ಹಾಡುಗಳಿಂದ ನಮ್ಮ ಸಾಂಪ್ರದಾಯಿಕ ಸಂಗೀತೆ-ಕಲೆಗಳು ನಶಿಸಿ ಹೋಗುತ್ತಿವೆ.
ರಂಗಭೂಮಿಗೆ ಬೇಕು ಆಶ್ರಯ ಮತ್ತು ಆರ್ಥಿಕ ಸಹಾಯ
ಪ್ರಸ್ತುತ ದಿನಗಳಲ್ಲಿ ರಂಗಭೂಮಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ರಂಗಭೂಮಿ ಮತ್ತು ಕಲಾವಿದರ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ನಮ್ಮ ದೇಶದ ಪ್ರಾಚೀನ ಸಂಸ್ಕೃತಿ, ಲಲಿತಕಲೆಗಳು, ನಾಟಕ, ರಂಗಭೂಮಿ, ಭರತನಾಟ್ಯ, ಕಥಕ್, ಕುಚಿಪುಡಿ, ಯಕ್ಷಗಾನ, ಲಾವಣಿ, ಕೋಳಿ ಗೀತ, ಬಿಹೋ ಮುಂತಾದ ದೇಶೀಯ ಕಲೆಗಳ ಸಂರಕ್ಷಣೆ ಮಾಡುತ್ತಾ, ಮುಂದಿನ ಜನಾಂಗಕ್ಕೆ ನಮ್ಮ ರಂಗಭೂಮಿ ಕಲೆ, ಪ್ರತಿಭೆ ಉಳಿಯಲು ವೇದಿಕೆ ಕಲ್ಪಿಸಿ ಕೊಡಬೇಕು. ಈ ರಂಗಭೂಮಿ ಕಲಾ ಮಾಧ್ಯಮದಿಂದ ಸಮಾಜದಲ್ಲಿನ ಓರೆ-ಕೋರೆಗಳನ್ನು ತಿದ್ದುತ್ತಾ, ಒಂದು ಒಳ್ಳೆಯ ಸಂದೇಶದೊಂದಿಗೆ ಮೌಲ್ಯಯುತವಾದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಾಟಕ ಮತ್ತು ರಂಗಭೂಮಿಯ ಪ್ರಾಮುಖ್ಯತೆಯನ್ನು ರಕ್ಷಿಸಬೇಕಾಗಿದೆ. ತಮ್ಮ ಇಡೀ ಜೀವನವನ್ನೇ ನಾಟಕ ಮತ್ತು ರಂಗಭೂಮಿಗಾಗಿ ತ್ಯಾಗ ಮಾಡಿದ ಅದೇಷ್ಟೋ ಕಲಾವಿದರು ಇಂದು ನೆಲೆ ಕಳೆದುಕೊಂಡು ಅನಾಥವಾಗಿದ್ದಾರೆ. ಇಂದು ಅದೇಷ್ಟೋ ರಂಗಭೂಮಿ ಮತ್ತು ಕಂಪನಿ ನಾಟಕಗಳ ಕಲಾವಿದರ ಒಂದು ಹೊತ್ತಿನ ಊಟಕ್ಕೂ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿಯಿದೆ. ನಮಗೆ ಮನರಂಜನೆಗಾಗಿ ಹಲವು ಮಾಧ್ಯಮಗಳಿದ್ದರೂ ಸೃಜನಶೀಲತೆಯನ್ನು ಹೊರ ಹಾಕುವ ಮತ್ತು ಅರಳಿಸುವ ಪಾತ್ರವನ್ನು ರಂಗಭೂಮಿಯು ಮಾಡುತ್ತದೆ. ಆಧುನಿಕ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ನಮ್ಮ ಮೂಲ ರಂಗಭೂಮಿ ಮತ್ತು ನಾಟಕ ಸಂಸ್ಕೃತಿ ಮಾಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಮೌಲ್ವಿಕ, ನೈತಿಕ ಮತ್ತು ವೈಚಾರಿಕತೆಯ ಸಂದೇಶ ನೀಡುವ ನಾಟಕ ಮತ್ತು ರಂಗಭೂಮಿ ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಇಡೀ ಜಗತ್ತಿಗೆ ಶ್ರೇಷ್ಠ ನಟ, ನಟಿ, ಕಲಾವಿದರನ್ನು ಕೊಡುಗೆಯಾಗಿ ನೀಡಿದ ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಗಳು, ಮೈಸೂರು ನೀನಾಸಂ, ಧಾರವಾಡ ರಂಗಾಯಣ, ಬೆಂಗಳೂರಿನ ಗುಬ್ಬಿ ವೀರಣ್ಣ ನಾಟಕ ಕಂಪನಿಗಳ ರಕ್ಷಣೆಯಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಮತ್ತು ಅಶ್ಲೀಲ ಸಾಹಿತ್ಯದತ್ತ ಮುಖ ಮಾಡುತ್ತಿರುವ ನಮ್ಮ ಯುವಕರಲ್ಲಿ ಮೌಲ್ಯಾಧಾರಿಕ ಮತ್ತು ಸಮಾಜಮುಖಿ ಸಂದೇಶವಾಹಕ ನಾಟಕಗಳನ್ನು ಮತ್ತು ರಂಗಭೂಮಿಯನ್ನು ಸಂರಕ್ಷಿಸುವ ಕಾರ್ಯ ಜಾನಪದ ನಾಟಕ ಅಕ್ಯಾಡೆಮಿಗಳಿಂದ ನಡೆಯಬೇಕು. ಭಾವ ಲಹರಿ, ಸಂವೇದನಾಶೀಲತೆ ಮತ್ತು ಸಮಾಜದಲ್ಲಿನ ಅನಿಷ್ಠಗಳನ್ನು ಪ್ರತಿಬಿಂಬಿಸುವ ನಮ್ಮ ರಂಗಭೂಮಿ ಮತ್ತು ನಾಟಕ ಸಂಸ್ಕೃತಿಯನ್ನು ಜೀವಂತವಾಗಿಡುವದು, ರಂಗಭೂಮಿಯ ಮಹತ್ವವನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ. ಡಿಜಿಟಲೀಕರಣ ಈ ಕಾಲಘಟ್ಟದಲ್ಲಿ ಅಳಿವಿನ ಅಂಚಿನಲ್ಲಿರುವ ವೃತ್ತಿ ರಂಗಭೂಮಿ ಕಲಾವಿದರನ್ನು ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರನ್ನು ಪೋಷಿಸಿ-ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮಾರ್ಚ ೨೭ ರಂದು ಸಮಾಜದಲ್ಲಿ ಜನಜಾಗೃತಿ ಮೂಡಿಸುವುದು ಮತ್ತು ಕಲೆಗೆ ಸೂಕ್ತ ಬೆಲೆ ನೀಡುವ ಕಾರ್ಯ ನಮ್ಮಿಂದಾಗಬೇಕು. ಈ ದಿನದಂದು ಪ್ರಪಂಚದಾದ್ಯಂತ ರಂಗಭೂಮಿಯ ಮಹತ್ವವನ್ನು ಎತ್ತಿ ತೋರಿಸುವ ಮತ್ತು ನಾಟಕ ಕಂಪನಿಗಳಿಗೆ ಉತ್ತೇಜನ ನೀಡುವಂತಹ ದಿಶೆಯನ್ನು ನೌವೆಲ್ಲರೂ ಶ್ರಮಿಸಬೇಕಾಗಿದೆ.
೨೦೨೬ ನೇಯ ವರ್ಷದ ಘೋಷವಾಕ್ಯ
ಅಮೇರಿಕಾದ ಖ್ಯಾತ್ ನಟ ಮತ್ತು ರಂಗಭೂಮಿ ಕಲಾವಿದ ವಿಲಿಯಂ ಡಫೋಯಿ ಅವರು ಈ ವರ್ಷದ ರಂಗಭೂಮಿ ದಿನದ ಘೋಷವಾಕ್ಯ “ರಂಗಭೂಮಿ ಮತ್ತು ಸಂಸ್ಕೃತಿ-ಶಾಂತಿಯ ಪ್ರತೀಕ” ಎಂಬರ್ಥದಲ್ಲಿ ಪ್ರಚುರಪಡಿಸಿ, ವಿಶ್ವದಾದ್ಯಂತ ರಂಗಭೂಮಿಯಿಂದ ಸಂಸ್ಕೃತಿ ಮತ್ತು ಶಾಂತಿ ನೆಲ್ಲೆಗೊಳ್ಳಲೆಂಬುದೇ ಇದರ ಧ್ಯೇಯವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದ ಶಿಕ್ಷಣದಲ್ಲಿ ಮಕ್ಕಳಲ್ಲಿ ನಾಟಕ, ರಂಗಭೂಮಿ ಮತ್ತು ಜಾನಪದ ಕಲೆ, ಪ್ರತಿಭೆಗಳು ಒಡಮೂಡುವಂತೆ ಪ್ರೇರೇಪಣೆ ಕಾರ್ಯ ನಡೆಯಬೇಕು. ಇದು ಕೇವಲ ಮನರಂಜನೆಯಲ್ಲ. ಬದಲಾಗಿ ಸಮಾಜದ ಪ್ರತಿಬಿಂಬ, ಸಾಂಸ್ಕೃತಿಕ ವಿನಿಮಯ ಮತ್ತು ಸಂವೇದನೆಗಳನ್ನು ಎಚ್ಚರಿಸುವ ಸಶಕ್ತ ಮಾಧ್ಯಮವಾಗಿದೆ. ಆದ್ದರಿಂದ ನಮ್ಮ ದೇಶೀಯ ಕಲೆ, ಸಂಸ್ಕೃತಿ ಮತ್ತು ಬದುಕಿನ ಸಂಕೇತವಾಗಿರುವ ರಂಗಭೂಮಿಯನ್ನು ಪ್ರೀತಿಸೋಣ ಮತ್ತು ಉಳಿಸಿ-ಬೆಳಸೋಣ.
ಕೊನೆಯ ನುಡಿ
ನಾವು ಪ್ರತಿದಿನ ಹಾಸ್ಯ, ದುರಂತ, ಸಂಗೀತ, ನಾಟಕ ಮತ್ತು ರಂಗಭೂಮಿಯಲ್ಲಿ ನಡೆಯುವ ಕಲಾ ಪ್ರದರ್ಶನಗಳನ್ನು ವೀಕ್ಷಿಸಿ, ನಮ್ಮ ದೇಶದ ಜಾನಪದ ಮತ್ತು ನಾಟಕ ಸಂಸ್ಕೃತಿಗೆ ಕನಿಷ್ಠ ಮಾರ್ಚ ೨೭ ರಂದು ಕಲಾ ಪ್ರಕಾರಗಳನ್ನು ನೋಡುವುದದರ ಮೂಲಕ ಗೌರವ ಸಲ್ಲಿಸುವಂತಾಗಬೇಕು. ನಷ್ಟದಲ್ಲಿರುವ ಮತ್ತು ಅವನತಿ ಹಂತದಲ್ಲಿರುವ ರಂಗಭೂಮಿ ಮತ್ತು ನಾಟಕ ಕಂಪನಿಗಳಿಗೆ ಆರ್ಥಿಕ ನೆರವು ನೀಡಿ, ಅವು ಇನ್ನಷ್ಟು ಅಭಿವೃದ್ಧಿ ಹೊಂದಲು ಸರ್ಕಾರ ಮತ್ತು ಸಾರ್ವಜನಿಕರು ಮತ್ತು ಸರ್ಕಾರೇತರ ಸಂಸ್ಥೆಗಳು ಅಗತ್ಯ ಹಣಕಾಸಿನ ನೆರವು ನೀಡಬೇಕು. ಬದುಕಿಗಾಗಿ ರಂಗಭೂಮಿಯಲ್ಲಿ ಕಲಾವಿದರಾಗಿ ತೊಡಗಿಸಿಕೊಂಡ ಮತ್ತು ರಂಗಭೂಮಿ ಹಿನ್ನೆಲೆಯಿಂದ ಬಂದು ಸಿನಿಮಾ ರಂಗಕ್ಕೆ ಲಗ್ಗೆ ಇಟ್ಟು ಬದುಕಿ ಕಟ್ಟಿಕೊಂಡ ವೃತ್ತಿ ಮತ್ತು ಹವ್ಯಾಸಿ ಕಲಾವಿದರು ಮಾಡಿದ ನಾಟಕವನ್ನು ನೋಡಬೇಕು. ರಂಗ ಕಲೆಯನ್ನು ಉಳಿಸುವ ಸಲುವಾಗಿ ದೇಶದಲ್ಲಿರುವ ಸಾಕಷ್ಟು ರಂಗಭೂಮಿ ತರಬೇತಿ ಕೇಂದ್ರಗಳು ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಬೇಕು ಮತ್ತು ಈ ರಂಗ ಕಲೆಯನ್ನು ಪ್ರೋತ್ಸಾಹಿಸಿ ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕು.


