ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ತಿಕೋಟಾ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ವತಿಯಿಂದ ಗುರುವಾರ ತಹಶೀಲ್ದಾರ ಕಛೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಯಿತು.
ಸಂಘದ ತಾಲ್ಲೂಕ ಅಧ್ಯಕ್ಷ ಪ್ರಭು ಸಾತಿಹಾಳ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ, ಸೇವಾ ಸೌಲಭ್ಯ ಮತ್ತು ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸಲು ಇಂದು ಮುಷ್ಕರ ಕೈಗೊಂಡಿದ್ದು, ಅನಿರ್ದಿಷ್ಟಾವಧಿ ವರೆಗೆ ಕೆಲಸ ಸ್ಥಗಿತಗೊಳಿಸಿದ್ದೇವೆ.
ಇಲಾಖೆಯ ಹದಿನೇಳಕ್ಕಿಂತ ಹೆಚ್ಚು ಆ್ಯಪ್ ಗಳಲ್ಲಿ ಕೆಲಸ ಮಾಡಬೇಕಾಗಿರುವದರಿಂದ ಮೊಬೈಲ್, ಲ್ಯಾಪಟಾಪ್, ನೆಟ್ ಸೌಲಭ್ಯ ಒದಗಿಸಬೇಕು. ಇವುಗಳ ಒತ್ತಡದಿಂದ ಗ್ರಾಮ ಅಧಿಕಾರಿಗಳ ಸಾವು ಸಂಭವಿಸುತ್ತಿವೆ. ನಮ್ಮ ಬೇಡಿಕೆ ಈಡೇರುವವರೆಗೂ ಆಧಾರ ಸೀಡ್, ಲ್ಯಾಂಡ್ ಬಿಟ್, ಬಗೈರ ಹುಕುಂ, ನಮೂನೆ ಒಂದರಿಂದ ಐದು ವೆಬ್ ಅರ್ಜಿ, ಪೌತಿ ಅಂದೋಲನ ಆ್ಯಪ್ ಕಾರ್ಯ ಮಾಡುವದಿಲ್ಲ. ಅಂತರ ಜಿಲ್ಲಾ ವರ್ಗಾವಣೆ ಸಮಸ್ಯೆ ಇತ್ಯರ್ಥ ಸೇರಿದಂತೆ ಹಲವು ಬೇಡಿಕೆ ಈಡೇರಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮಶಾಖ ಬಂಟನೂರ, ಉಪಾಧ್ಯಕ್ಷ ಆರ್.ಎ.ಮುಲ್ಲಾ, ಖಜಾಂಚಿ ಟಿ.ಎಚ್.ಸಾರವಾನ, ಗ್ರಾಮ ಆಡಳಿತ ಅಧಿಕಾರಿಗಳಾದ ಜಗದೀಶ ಹಂಗರಗಿ, ಆರ್.ಬಿ.ಬಡಿಗೇರ, ವಾಸೀಮ ಚೌದ್ರಿ, ಶಿವರಾಜ ಸೋಲಾಪೂರೆ, ಅಶ್ವಿನಿ ಕಾವಾಡಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಗ್ರಾಮ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

