ವಿಶ್ರಾಂತ ದೈಹಿಕ ಶಿಕ್ಷಕ ಅನಂತಪೂರ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸಮೀಪದ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹಲ ದಶಕಗಳ ಕಾಲ ಅಮೋಘ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅನಂತಪೂರ ದಂಪತಿಗಳಿಗೆ ಹೃದಯಸ್ಪರ್ಶಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಹಳೆ ವಿದ್ಯಾರ್ಥಿಗಳಾದ ಚಿಕ್ಕಪಡಸಲಗಿ ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಶಿಕ್ಷಕಿ ಶ್ರೀಮತಿ ಶಾಂತಾ ರೋಣಿಹಾಳ ಹಾಗೂ ಅವರ ಸಹೋದರಿ ಶ್ರೀಮತಿ ಕಲಾವತಿ ಕರ್ಜಗಿ, ಪುತ್ರ ತರುಣ, ಮೊಮ್ಮಗಳು ದಿಯಾ ಸೇರಿದಂತೆ ಅಪ್ತರು ಜಮಖಂಡಿ ನಿವಾಸಕ್ಕೆ ತೆರಳಿ ಅನಂತಪೂರ ದಂಪತಿಗಳಿಗೆ ಆತ್ಮೀಯವಾಗಿ ಶಾಲು ಹೊದಿಸಿ ಸತ್ಕರಿಸಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀಮತಿ ಶಾಂತಾ ರೋಣಿಹಾಳ, ತಾವು ಅನಂತಪೂರ ಗುರುಗಳ ಕೈಯಲ್ಲಿ ಕಲಿತು ಅಕ್ಷರ ಜ್ಞಾನ ಪಡೆದಿರುವುದು ನನ್ನ ಸೌಭಾಗ್ಯ. ಅವರ ಶಿಸ್ತುಬದ್ಧ ಚಾಕಚಕ್ಕತೆಯ ನಡೆನುಡಿಗಳಿಂದ ಪ್ರೇರಿತಳಾಗಿ ಆದರ್ಶಪ್ರಾಯವಾದ ಗುಣಸ್ವಭಾವ ಮೈಗೂಡಿಸಿಕೊಂಡಿರುವೆ. ಅನಂತಪೂರ ಗುರುಗಳು ಸಮರ್ಥವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿ ಸೇವಾ ನಿವೃತ್ತಿಯಾಗಿರುವುದು ಸಂತಸವಾಗಿದೆ ಎಂದರು.
ಸಾವಿರಾರು ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಅಭಿರುಚಿ, ಆಟೋಟಗಳ ಒಲವು ಸೂಕ್ತ ಮಾರ್ಗದರ್ಶನದ ಮೂಲಕ ಮೂಡಿಸಿ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಜೀವನೋತ್ಸಾಹದ ಮೌಲ್ಯ ತಂದು ಕೊಟ್ಟಿದ್ದಾರೆ. ನೈತಿಕವಾಗಿ ಜೀವನ ಸಾಗಿಸಲು ದಾರಿದೀಪವಾಗಿ ಮಿನುಗಿದ್ದಾರೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪುಷ್ಟಿ ನೀಡಿ ಆದರ್ಶತನ ತೋರಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸುಧಾರಣೆಗೆ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿ ಅವಿರತ ಶ್ರಮಿಸಿ ವೃತ್ತಿ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅನಂತಪೂರ ಗುರುಗಳಲ್ಲಿರುವ ಶಿಸ್ತು, ಸಂಯಮತೆಯ ಬದ್ದತೆ, ಉತ್ಸಾಹ, ಲವಲವಿಕೆ ಈಗಲೂ ಕುಗ್ಗಿಲ್ಲ.ದಿನಕಳೆದಂತೆ ಅವು ಉತ್ಕಾಯ ಮಟ್ಟದಲ್ಲಿ ಸಾಗುತ್ತಿದೆ. ದೇವರು ಹೀಗೆಯೇ ಆರೋಗ್ಯಕರ ಜೀವನ ನಮ್ಮ ಮೆಚ್ಚಿನ ಗುರುವಿಗೆ ಸದಾ ಕರುಣಿಸಲಿ ಎಂದು ಶಿಷ್ಯೆ ಶಾಂತಾ ರೋಣಿಹಾಳ ಗುರುವಿಗಾಗಿ ಶುಭ ಪ್ರಾಥಿ೯ಸಿದರು.

