ಚಿಮ್ಮಡದಲ್ಲಿ ಚರ್ಮ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಸಮಾರೋಪ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಸರಕಾರ ಹಾಗೂ ನಿಗಮದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ನಡೆಸುವುದರ ಮೂಲಕ ಸ್ವಾವಲಂಭಿಗಳಾಗಿ ಬದುಕಬೇಕೆಂದು ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ನಾಗರಾಜ ಮುಂಡರಗಿ ಹೇಳಿದರು.
ಗ್ರಾಮದ ಜನತಾ ಪ್ಲಾಟ್ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೬೦ ದಿನಗಳ ತರಬೇತಿ ಸಮಾರೋಪ ಹಾಗೂ ಫಲಾನುಭಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತರಬೇತುದಾರರು ನಿಗಮದಿಂದ ದೊರೆಯುವ ಸಾಲ ಸೌಲಭ್ಯ ಪಡೆಯುವ ಮೂಲಕ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆಸಬೇಕೆಂದರು.
ಜಿಲ್ಲಾ ಸಂಯೋಜಕ ಎನ್.ಎ. ಗಂಗಾಧರ ಮಾತನಾಡಿ, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಇದುವರೆಗೆ ಗ್ರಾಮ ವ್ಯಾಪ್ತಿಯಲ್ಲಿಯೇ ನೂರಾರು ಜನ ಫಲಾನುಭವಿಗಳು ವ್ಯಾನಿಟಿ ಬ್ಯಾಗ್, ಪರ್ಸ್, ಪೌಚ್ ಸೇರಿದಂತೆ ಹಲವಾರು ವಸ್ತುಗಳನ್ನು ತಯಾರಿಸುವ ತರಬೇತಿ ಪಡೆದುಕೊಂಡಿದ್ದು ಪ್ರತಿಯೊಬ್ಬರು ಈ ಉದ್ಯೋಗ ಮುಂದುವರಿಸುವ ಮೂಲಕ ಸ್ವಾವಲಂಭಿಗಳಾಗಿ ಬದುಕಬೇಕೆಂದರು.
ಪ್ರಮುಖರಾದ ಸುಂದರ ಪೂಜಾರಿ, ಉಪನ್ಯಾಸಕ ಶೇಖರ ದೊಡವಾಡ, ಸಂಘಟಿಕರಾದ ಶ್ರೀಮತಿ ರೇಖಾ ಸರವಿ, ಸದಾಶಿವ ಮೇತ್ರಿ, ಮಹಾದೇವ ಗೋವಿಂದಗೋಳ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ವೇಳೆ ಫಲಾನುಭವಿಗಳಿಗೆ ಚರ್ಮ ಕೈಗಾರಿಕಾ ಯಂತ್ರ ಹಾಗೂ ಪರಿಕರಗಳನ್ನು ವಿತರಿಸಲಾಯಿತು.

