ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ. ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಹೊತ್ತು ಮಳೆ ಸುರಿಯಿತು. ರಾತ್ರಿ ೯ ಗಂಟೆ ಸುಮಾರಿಗೆ ಸಿಡಿಲು,ಗುಡುಗು ಅಬ್ಬರದೊಂದಿಗೆ ಆರಂಭವಾದ ಜೋರಾದ ಮಳೆ ತಡರಾತ್ರಿಯವರೆಗೂ ಸುರಿಯಿತು.
ತೊಗರಿ ಬೆಳೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳು ಮಳೆಯ ಕೊರತೆಯಿಂದ ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ಆತಂಕದಲ್ಲಿದ್ದ ರೈತ ಬಾಂಧವರಿಗೆ ಈ ಮಳೆಯು ಒಂದಷ್ಟು ಬೆಳೆಗಳಿಗೆ ಆಸರೆ ತಂದಿರುವದರಿಂದ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಜೋರಾದ ಸುರಿದ ಮಳೆ ಪರಿಣಾಮ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ಉಕ್ಕಲಿ, ದಿಂಡವಾರ ಗ್ರಾಮದಲ್ಲಿ ತಲಾ ಒಂದೊಂದು ಕಚ್ಚಾ ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ವಿವರಃ ಬಸವನಬಾಗೇವಾಡಿ ಕೇಂದ್ರದಲ್ಲಿ ೫೯ ಎಂ.ಎಂ., ಹೂವಿನಹಿಪ್ಪರಗಿ ಕೇಂದ್ರದಲ್ಲಿ ೨೪.೨ ಎಂ.ಎಂ., ಮನಗೂಳಿ ಕೇಂದ್ರದಲ್ಲಿ ೩೧.೨ ಎಂ.ಎಂ., ಆಲಮಟ್ಟಿ ಕೇಂದ್ರದಲ್ಲಿ ೭೩.೮ ಎಂ.ಎಂ, ಅರೇಶಂಕರ ಕೇಂದ್ರದಲ್ಲಿ ೯೦ ಎಂ.ಎಂ., ಮಟ್ಟೀಹಾಳ ಕೇಂದ್ರದಲ್ಲಿ ೮ ಎಂ.ಎಂ. ಮಳೆ ಪ್ರಮಾಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
