ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಪೌರಕಾರ್ಮಿಕರು ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಆರೋಗ್ಯ ರಕ್ಷಣಾ ಕವಚಗಳನ್ನು ಬಳಕೆ ಮಾಡುವದು ತುಂಬಾ ಅಗತ್ಯವಿದೆ ಎಂದು ಮನಗೂಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯವಾಗಿದೆ ಎಂದರು.
ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಮನುಷ್ಯನ ಸುಖ ಜೀವನದಲ್ಲಿದೆ. ಜೀವನ ಕೆಲಸದಲ್ಲಿದೆ. ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ. ಬಸವಾದಿ ಶರಣರು ಸ್ವಚ್ಛತೆಯ ಯಾವುದೇ ಕೆಲಸವನ್ನು ಮಾಡಿದರೂ ಅದಕ್ಕೆ ಕಾಯಕ ಎಂದು ಅದನ್ನು ದೈವತ್ವಕ್ಕೇರಿಸಿದರು. ಅಂತಹ ಕಾಯಕದ ಕಾಲ ಬಳಿ ಸ್ವರ್ಗವಿದೆ ಎಂದರು.
ಇನ್ನೋರ್ವ ಸಾಹಿತಿ ಸಿದ್ದರಾಮ ಬಿರಾದಾರ ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಸ್ಮರಿಸುವ ಈ ದಿನ ಬಹಳ ಮಹತ್ವಪೂರ್ಣವಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಭಾಗ್ಯರಾಜ ಸೊನ್ನದ ಅವರು ಪೌರಕಾರ್ಮಿಕರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಡಾ.ಆರ್.ಕೆ.ಪತ್ತಾರ, ಶೇಖರಗೌಡ ಬಿರಾದಾರ, ಗೌಡಪ್ಪ ಗುಜಗೊಂಡ, ಗುರುಲಿಂಗಯ್ಯ ಹಿರೇಮಠ, ಅಮೀನಸಾಬ ದಳವಾಯಿ, ತಿಪ್ಪಣ್ಣ ಕ್ಯಾತನ್ನವರ ಇತರರು ಇದ್ದರು.
ವಿರೇಶ ಹಿರೇಮಠ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದ ರಮೇಶ ಜಾನಕರ, ಯಮನವ್ವ ದಾಸರ, ಶಿವಾನಂದ ನರಸನಗೌಡರ, ಸದಾಶಿವ ಇತರರನ್ನು ಸನ್ಮಾನಿಸಲಾಯಿತು.
ಖಾಯಂ ಪೌರಕಾರ್ಮಿಕರಿಗೆ ರೂ. ೭ ಸಾವಿರ ವಿಶೇಷ ಭತ್ಯೆಯ ಚೆಕ್, ಎಲ್ಲ ಪೌರಕಾರ್ಮಿಕರಿಗೆ ಎರಡು ಜೊತೆ ಸಮವಸ, ರೇನಕೋಟ್, ಸುರಕ್ಷಾ ಪರಿಕರಗಳನ್ನು ವಿತರಿಸಲಾಯಿತು.

