ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದಕ್ಕೆ ಬರುತ್ತಲಿದ್ದಾರೆ. ಆ ಗ್ರಾಮದ ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನೂತನ ಬಸ್ಸಿಗೆ ಮಂಗಳವಾರ ವಿದ್ಯಾರ್ಥಿಗಳಿಂದಲೇ ಚಾಲನೆ ನೀಡಿಸಿ ಮಾತನಾಡಿದ ಅವರು, ಬಸ್ಸಿನ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಬೀಳುತ್ತಿದ್ದರು. ಇದನ್ನು ಅರ್ಥೈಸಿಕೊಂಡು ಆ ಗ್ರಾಮದ ಯಾವ ಮಕ್ಕಳಿಗೂ ಕಲಿಕಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿ ಅವರ ಬೇಡಿಕೆಯನ್ನು ಪೂರೈಸಲು ಮುಂದಾಗಿದ್ದೇವೆ. ತಾಲೂಕಿನಲ್ಲಿ ಇನ್ನೂ ಕೆಲವು ಗ್ರಾಮಗಳಿಂದ ಸಿಂದಗಿ ನಗರಕ್ಕೆ ಶಾಲಾ ಕಾಲೇಜಿನ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಂತವುಗಳನ್ನು ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಿಂದಗಿ ಘಟಕ ವಿಭಾಗಿ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದ್ಯಸ ನೂರಅಹಮ್ಮದ ಅತ್ತಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಶಂಬೇವಾಡ ಸೇರಿದಂತೆ ಗ್ರಾಮ ಪಂಚಾಯಿತ್ ಸದ್ಯಸರು, ಊರಿನ ಹಿರಿಯರು, ಯುವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ನಾನು ಕಾಲೇಜಿನ ವಿದ್ಯಾರ್ಥಿನಿ ನಮ್ಮ ಕಾಲೇಜು ಬೆಳಗ್ಗೆ ೭.೪೫ ಕ್ಕೆ ಪ್ರಾರಂಭಗೊಳ್ಳುತ್ತದೆ ಆದರೆ ಬಸ್ಸಿನ ಸೌಕರ್ಯವಿಲ್ಲದಿರುವ ಕಾರಣ ಖಾಸಗಿ ವಾಹನದಲ್ಲಿ ಬರುವ ನಾವುಗಳು ನಿತ್ಯ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಶೈಕ್ಷಣಕ್ಕೆ ನಿತ್ಯ ತೊಂದರೆಯಾಗುತ್ತಿತ್ತು. ಪ್ರಸ್ತುತ ನಾವು ನಮ್ಮ ಶಾಲಾ-ಕಾಲೇಜುಗಳ ಸರಿಯಾದ ಸಮಯಕ್ಕೆ ನಾವು ಇಂದು ಹೋಗುವಂತಾಗಿದ್ದೇವೆ. ಎಲ್ಲ ವಿದ್ಯಾರ್ಥಿಗಳ ಪರವಾಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.”
– ಲಕ್ಷ್ಮಿ ಪಾಟೀಲ
ಎಚ್.ಜಿ.ಕಾಲೇಜ್ ವಿದ್ಯಾರ್ಥಿನಿ

