ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರೈತ ಈ ದೇಶದ ಬೆನ್ನೆಲುಬು. ರೈತರ ಪ್ರಗತಿಯೇ ದೇಶದ ಪ್ರಗತಿ ಎಂದು ಯಾಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಸೋಮವಾರ ವಿ.ಪ್ರಾ.ಗ್ರಾ.ಕೃ.ಸ ಸಂಘದ ೪೮ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತ ಸ್ವಾವಲಂಬಿಯಾಗಿ, ಬದುಕನ್ನು ಆರ್ಥಿಕವಾಗಿ ಉಜ್ವಲಗೊಳಿಸಿಕೊಳ್ಳಬೇಕಾದರೆ ಸಹಕಾರಿ ಸಂಘಗಳಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ರೈತರು ಸಹಕಾರ ನೀಡಬೇಕು ಜೊತೆಗೆ ಸಮಯಕ್ಕನುಸಾರ ಸಾಲ ಮರುಪಾವತಿಸಬೇಕು. ಇದರಿಂದ ಉಳಿದ ರೈತರು ಸಾಲಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಮುಂಬರುವ ವರ್ಷದಿಂದ ನಮ್ಮ ಸಂಘದ ಮೂಲಕ ಬೀಜ ವಿತರಣಾ ಕೇಂದ್ರ ಆರಂಭಿಸಲಾಗುವುದು ಎಂದರು.
ಕಡಕೋಳ ಹಿರೇಮಠದ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ, ದೀಪ ಬೆಳಗಿಸಿ ಆಶೀರ್ವಚನ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆಯ್.ಲಗಳಿ ವರದಿ ವಾಚಿಸಿ, ೧೫೦೭ ಸದಸ್ಯ ಬಲದ ಸಂಘ ೨೦೨೩-೨೪ನೇ ಸಾಲಿನಲ್ಲಿ ೪ ಲಕ್ಷ ಮೂವತ್ತನಾಲ್ಕು ಸಾವಿರ ಲಾಭಗಳಿಸಿದೆ ಎಂದರು.
ನಂತರ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಂತ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನುಗೌಡ ನ್ಯಾಮಣ್ಣವರ, ಸಂಘದ ಉಪಾಧ್ಯಕ್ಷ ರಾವ್‌ಸಾಹೇಬಗೌಡ ನ್ಯಾಮಣ್ಣವರ, ಎಸ್.ಎಸ್.ಕೇಮಶೆಟ್ಟಿ, ನಿರ್ದೇಶಕರಾದ ಶಿವನಗೌಡ ಪಾಟೀಲ, ರವಿ ದೊಡಮನಿ, ಶಿವಾನಂದ ಮೂಲಿಮನಿ, ಸಂಗನಗೌಡ ತಳೇವಾಡ, ಯಲ್ಲಪ್ಪ ಬೂದಿಹಾಳ, ಎಂ.ಬಿ ಬಮ್ಮಣ್ಣವರ ದಯಾನಂದ ಗುರುಮಠ, ಬಿ.ವೈ.ಭಂಟನೂರ ಸೇರಿದಂತೆ ಎಲ್ಲ ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

