ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಇದು ಅವರನ್ನು ಸಾಧನೆ ಮತ್ತು ಯಶಸ್ಸಿನತ್ತ ಪ್ರೇರೇಪಿಸುತ್ತದೆ ಎಂದು ಮಹಿಳಾ ವಿವಿಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಿ.ಗಂಗಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ೨ನೇ ಅಥ್ಲೆಟಿಕ್ ಪ್ರೋಜೆಕ್ಟ್ ಮೀಟ್ -೨೦೨೪ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಅಧ್ಯಯನ, ಅಭ್ಯಾಸ, ಮತ್ತು ತರಬೇತಿ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗುತ್ತವೆ. ಕಠಿಣ ಪರಿಶ್ರಮ, ಸಮರ್ಪಣೆ, ಮತ್ತು ಸ್ಪಷ್ಟತೆ ಅವರನ್ನು ಮುನ್ನಡೆಸಲು ಅಡಿಪಾಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪಿ.ಬಳಿಗಾರ ಮಾತನಾಡಿ, ವಿದ್ಯಾರ್ಥಿನಿಯರು ದೇಶದ ಆಸ್ತಿ. ಎಲ್ಲರೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ರಾಜಕುಮಾರ ಪಿ ಮಾಲಿಪಾಟೀಲ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ಶಿಸ್ತು, ಬದ್ದತೆ, ಆತ್ಮವಿಶ್ವಾಸ ಮತ್ತು ನಿರಂತರ ತರಬೇತಿಯಿಂದ ಉತ್ತಮ ಸಾಧನೆ ಮಾಡಬಹುದು ಎಂದರು.
ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ನಿರ್ದೇಶಕ ಪ್ರೊ.ಶ್ರೀನಿವಾಸ, ಪ್ರೊ.ಹನುಮಂತಯ್ಯ ಪೂಜಾರಿ, ಪ್ರಾಧ್ಯಾಪಕರಾದ ಪ್ರೊ,ಜ್ಯೋತಿ ಉಪಾದ್ಯೆ, ಡಾ.ಅಶ್ವಿನಿ.ಕೆ.ಎನ್, ಡಾ.ಕಸ್ತೂರಿ, ಡಾ.ಜ್ಯೋತಿ ಅವಟಿ, ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಬಿಪಿಇಡಿ ಮತ್ತು ಎಂಪಿಇಡಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿದರು, ಸ್ನೇಹಾ ಅತಿಥಿಗಳನ್ನು ಪರಿಚಯಿಸಿದರು. ಸೌಜನ್ಯ ನಿರೂಪಿಸಿದರು. ಜಯಶ್ರೀ ವಂದಿಸಿದರು.

