ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೆಂಗಳೂರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ೨೦೨೪-೨೫ನೆಯ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಜ್ಞಾನ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಸ್ಥಳೀಯ ನ್ಯಾಯವಾದಿ ಪಿ.ಎಂ.ಹೊಸಮನಿ ಅವರ ಚಿರಂಜೀವಿಯಾದ ಕು.ಶ್ರೀಷನ ಅಪರೂಪದ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಶಿವಾಚಾರ್ಯರು, ಕಾರ್ಯದರ್ಶಿ ಸತೀಶ ಹಿರೇಮಠ ಸೇರಿದಂತೆ ಶಾಲೆಯ ಮುಖ್ಯಗುರುಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

ಶಾಸಕರಿಂದ ಶ್ರೀಷ ಗೆ ಸನ್ಮಾನ
ಸಿಂದಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಅಬು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಈಚೆಗೆ ನಡೆದ ಕ್ರೀಡಾಕೂಟ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅವರು ವಿದ್ಯಾರ್ಥಿ ಶ್ರೀಷ ಹೊಸಮನಿ ಸಾಧನೆಯನ್ನು ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶಾಂತಗೌಡ ಬಿರಾದಾರ, ಶಿಕ್ಷಣ ಇಲಾಖೆ ಅಧಿಕಾರಿಗಳು, ನ್ಯಾಯವಾದಿ ಪಿ.ಎಂ.ಹೊಸಮನಿ ಸೇರಿದಂತೆ ಅನೇಕರಿದ್ದರು.

