ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ತೆಗೆದು ಹಾಕುತ್ತೇನೆ ಎಂದು ಹೇಳಿರುವ ರಾಹುಲ್ ಗಾಂಧಿ ದಲಿತ ವಿರೋಧಿ ಹೇಳಿಕೆ ಖಂಡನೀಯ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಸಿಂದಗಿ ತಾಲೂಕು ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಪಕ್ಷ ೬೫ ವರ್ಷಗಳಿಂದ ದಲಿತರನ್ನು ತಮ್ಮ ಮನಃ ಬಂದ ಹಾಗೆ ಬಳಕೆ ಮಾಡಿಕೊಂಡಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ತೆಗೆದುಹಾಕುತ್ತೇನೆ ಎಂದು ಹೇಳಿದ ಲೋಕಸಭಾ ಸದಸ್ಯ ರಾಹುಲ ಗಾಂಧಿಯವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು. ಸಂವಿಧಾನ ಬರೆದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರನ್ನೇ ಎರಡು ಬಾರಿ ಸೋಲಿಸಿದ ಪಕ್ಷದ ನಾಯಕ ಮೀಸಲಾತಿಯನ್ನು ತೆಗೆಯುತ್ತೇನೆ ಎಂದು ಹೇಳಿರುವುದು ಶೋಷಿತ ಸಮುದಾಯಕ್ಕೆ ದಶಕಗಳಿಂದ ಮಾಡುತ್ತಿರುವ ಅವಮಾನವಾಗಿದೆ. ದಲಿತರಿಗೆ ಮೀಸಲಾತಿ ಕಾಂಗ್ರೆಸ್ ಕೊಟ್ಟ ಭಿಕ್ಷೆಯಲ್ಲ, ಅದು ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ವರ್ಗಕ್ಕೆ ನೀಡಿದ ಶ್ರೀರಕ್ಷೆ. ಮುಂಬರುವ ಸ್ಥಳೀಯ ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಜನರೇ ಕೊಡಲಿದ್ದಾರೆ ಎಂದು ಕದ್ದರಕಿ ಹೇಳಿದ್ದಾರೆ.

