ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ವಾರ್ಷಿಕ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಭರವಸೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ವರ್ಷದಲ್ಲಿಯೇ ೧೮೮ ಕೋಟಿ ವೆಚ್ಚದಲ್ಲಿ ಇಥಿನಾಲ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು. ಬರುವ ಡಿಸೆಂಬರ್ ತಿಂಗಳಲ್ಲಿಯೇ ಅದು ಕಾರ್ಯಾರಂಭ ಮಾಡಲಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಹಾಗೂ ಸಹಕಾರಿ ರಂಗಕ್ಕೆ ಸೇರಿದ ಎಲ್ಲಾ ಸಚಿವರನ್ನು ಕರೆಸಲಾಗುವದು ಎಂದು ಶಾಸಕ ಮತ್ತು ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಿದ್ದ ೬ನೇ ವರ್ಷದ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೨೦೧೭-೨೦೧೮ ರಲ್ಲಿ ಪ್ರಾರಂಭವಾದ ಈ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರಿಗೆ ಕೇಂದ್ರ ಸರ್ಕಾರದ ಎಪ್ ಆರ್ ಪಿ ದರಕ್ಕಿಂತ ಹೆಚ್ಚಿನ ದರ ನೀಡಲಾಗಿದೆ. ಕಳೆದ ೬ ವರ್ಷಗಳಲ್ಲಿ ರೂ.೫೨.೫೮ ಕೋಟಿಗೂ ಅಧಿಕ ಹಣವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇಲ್ಲಿಯವರೆಗೆ ರೈತರ ಬಿಲ್ಲಿನ ಯಾವದೇ ಹಣ ಬಾಕಿ ಉಳಿಸಿಕೊಂಡಿಲ್ಲ ಮತ್ತು ಕಾರ್ಖಾನೆ ಕಟ್ಟಲು ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಾಲದ ಗಂಟು ಮತ್ತು ಬಡ್ಡಿ ಸಮೇತ ಕಟ್ಟುತ್ತ ಬಂದಿದ್ದೇವೆ. ಯಾವದೇ ಬಾಕಿ ಉಳಿಸಿಕೊಂಡಿಲ್ಲ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇವೆ ಎಂದರು.
ಸಭೆಯಲ್ಲಿ ಸಹಕಾರಿ ರತ್ನ ಶ್ರೀಮಂತ ಇಂಡಿ, ರೈತ ಮುಖಂಡ ಗುರುನಾಥ ಬಗಲಿ, ಶರಣಗೌಡ ಪಾಟೀಲ, ಎಸ್.ಬಿ.ಬೂದಿಹಾಳ ಅವರು ಕಾರ್ಖಾನೆಯ ಸ್ಥಳದಲ್ಲಿ ರೈತ ಸಮ್ಮೇಳನಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.
ಎಂ.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಖಾನೆಯ ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಬಿ.ಎಂ. ಕೋರೆ, ಸಿದ್ದಣ್ಣ ಬಿರಾದಾರ, ಜೆಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರೀ, ಲಲಿತಾ ನಡಗೇರಿ, ಸರೋಜನಿ ಪಾಟೀಲ, ವಿಶ್ವನಾಥ ಬಿರಾದಾರ, ದುಂಡಪ್ಪ ಖೇಡ, ಎಂಡಿ ಎಸ್.ಕೆ. ಭಾಗ್ಯಶ್ರೀ ಇದ್ದರು.

“ಕಾರ್ಖಾನೆ ಪ್ರತಿ ವರ್ಷ ಕನಿಷ್ಟ ೫.೫ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಬೇಕು. ಆದರೆ ಅಷ್ಟು ನುರಿಸುವದು ಕಷ್ಟವಾಗುತ್ತಿದೆ. ಕಾರಣ ರೈತರು ಇನ್ನು ಕಾರ್ಖಾನೆಗೆ ಹೆಚ್ಚಿನ ಮತ್ತು ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಕೋರುವೆ.”
– ಯಶವಂತರಾಯಗೌಡ ಪಾಟೀಲ
ಶಾಸಕರು, ಇಂಡಿ

