ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣ ಎಂಬ ಧಿವ್ಯ ಬೆಳಕನ್ನು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಗಿಸಿದ ಶ್ರೇಯಸ್ಸು ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ದಿ.ಶ್ರೀ ಲಿಂಗರಾಜ ವಿವಿದೋದ್ಧೇಶ ಸಂಸ್ಥೆ, ಶ್ರೀ ಸಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ನಿಯಮಿತ, ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣವೇ ಶಕ್ತಿ ಎಂದು ತಿಳಿದಿದ್ದರು, ಹೀಗಾಗಿ ತಮ್ಮ ಅಪಾರ ಸಂಪತ್ತನ್ನು ಶಿಕ್ಷಣದ ಪವಿತ್ರ ಕಾರ್ಯಕ್ಕೆ ಬಳಕೆಯಾಗಬೇಕು ಎಂದು ದಾನ ಮಾಡಿದರು. ಅವರ ತ್ಯಾಗ, ಶ್ರಮದ ಫಲವಾಗಿ ಕೆ.ಎಲ್.ಇ., ಬಿಎಲ್ಡಿಇ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.
ಜಿ.ಪಂ.ಮಾಜಿ ಸದಸ್ಯೆ ಪ್ರತಿಭಾಗೌಡತಿ ಪಾಟೀಲ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ, ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವುದರಿಂದ ಇತರರಿಗೂ ಸ್ಪೂರ್ತಿ ದೊರಕುತ್ತದೆ, ಪ್ರತಿಭಾ ಪುರಸ್ಕಾರ ಒಂದು ಮಹತ್ವಪೂರ್ಣ ಕಾರ್ಯ ಎಂದರು.
ಇಂಡಿಯ ಸಿದ್ಧರಾಮೇಶ್ವರ ಮಠದ ಡಾ ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು.
ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ, ಶಿರಸಂಗಿ ಲಿಂಗರಾಜ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ, ಎಸ್ ಎ ಬಿರಾದಾರ (ಕನ್ನಾಳ) ಆರ್ ಎಸ್ ಜನಗೋಂಡ ಹಾಗೂ ಸಮಾಜದ ಎಲ್ಲ ಸ್ಥರದ ನೌಕರರು, ಹಿರಿಯರು ಯುವಕರು, ತಾಯಂದಿರು ಪಾಲ್ಗೊಂಡಿದ್ದರು.

” ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣಕ್ಕಾಗಿ ತಮ್ಮ ಸಂಪತ್ತು ದಾನ ಮಾಡಿದ ಮಹಾನ್ ಶಿಕ್ಷಣ ಪ್ರೇಮಿ, ಅವರ ತ್ಯಾಗ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ನಾವು ಅವರಿಗೆ ಗೌರವ ಸಲ್ಲಿಸಬೇಕಿದೆ.”
– ಜಿ.ಕೆ. ಪಾಟೀಲ
ವಿಧಾನ ಪರಿಷತ್ ಮಾಜಿ ಸದಸ್ಯರು

