ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಟಿಪ್ಪರನ ಹಿಂಬದಿ ಸಿಲುಕಿ ಎರಡೂ ಕೈಗಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ತಲುಪುವ ಮುನ್ನವೇ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಬಳಿ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ವಿನೋದ ತಿಪ್ಪಣ್ಣ ಶಹಾಪೂರ(೧೯) ಎಂದು ಗುರುತಿಸಲಾಗಿದೆ. ಬಸವೇಶ್ವರ ವೃತ್ತದಿಂದ ನೇಬಗೇರಿ ಗ್ರಾಮದತ್ತ ಹೊರಟಿದ್ದ ಟಿಪ್ಪರ್ ಗೆ ನೇಬಗೇರಿ ಕಡೆಯಿಂದ ದ್ವಿಚಕ್ರ ವಾಹನ ಸವಾರಿ ಮಾಡುತ್ತ ಬರುತ್ತಿದ್ದ ವಿನೋದ ಪಟ್ಟಣದ ಲಕ್ಷ್ಮಿ ಚಿತ್ರ ಮಂದಿರದ ಬಳಿ ಬಂದಾಗ ಟಿಪ್ಪರ್ ನ ಮಧ್ಯಭಾಗಕ್ಕೆ ಕೈ ತಗುಲಿ ಬೈಕ್ ನಿಂದ ಕೆಳಗೆ ಬಿದ್ದು ಮತ್ತೊಂದು ಕೈ ತೋಳಿನ ಮೇಲೆ ಟಿಪ್ಪರ್ ನ ಹಿಂಬದಿ ಚಕ್ರ ಹರಿದು ಗಂಭೀರ ಸ್ವರೂಪದ ಗಾಯವಾಗಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಗಾಯಾಳುವನ್ನು ಅಟೋ ಮೂಲಕ ಸ್ಥಳೀಯ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತೆರಳುವಾಗ ಮಾರ್ಗ ಮಧ್ಯೆ ಗಾಯಾಳು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

