ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ದಲಿತ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರನ್ನು ಏಳಿಗೆ ಸಹಿಸದವರು ಷಡ್ಯಂತ್ರ ರಚಿಸಿ ಜೈಲು ಪಾಲಾಗುವಂತೆ ಮಾಡಿದ್ದು ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ದಲಿತ ಸೇನೆ ತಾಲೂಕು ಅಧ್ಯಕ್ಷ ಮಹಾಂತೇಶ ಬಳೂಂಡಗಿ ಹೇಳಿದರು.
ಅವರು ಪಟ್ಟಣದ ತಹಸೀಲ್ ಕಛೇರಿಯಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ಕಲಬುರಗಿ ನಗರದಲ್ಲಿರುವ ಕೆಲವು ಪುಡಿ ರೌಡಿಗಳು, ಮಿಟರ್ ಬಡ್ಡಿ ಆಡುವವರು, ಸಮಾಜಘಾತುಕ ಕೆಲಸ ಮಾಡುವವರು ಕೂಡಿಕೊಂಡು ಷಡ್ಯಂತ್ರ ರಚಿಸಿ ನ್ಯಾಯವಾದಿ, ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವ ಹನುಮಂತ ಯಳಸಂಗಿ ಅವರನ್ನು ಬಿಡುಗಡೆಗೊಳಿಸಿ ಷಡ್ಯಂತ್ರ ರಚಿಸಿದವರನ್ನು ಬಂಧಿಸಿ ರಾಜ್ಯ ನೋಡುವ ರೀತಿಯಲ್ಲಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರವಿ ಕಾಂಬಳೆ, ಮಹಾದೇವ ಅಂಕಲಗಿ, ಸಂತೋಷ ಸಿಂಗೆ, ಪ್ರಭು ತಾವಟೆ, ರಾಕೇಶ ಬಂಕದ್, ನಾಗಪ್ಪ ಮೂರಮನ್, ಕುಮಾರ ಹೊನ್ನೇಕ್, ಹಣಮಂತ ಬಂಕದ, ಜೈಭೀಮ್ ತೇಲ್ಕರ್ ಸೇರಿದಂತೆ ಅನೇಕರು ಇದ್ದರು.

