ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಅರ್ಜುಣಗಿ ತಾಂಡಾದಿಂದ ಬಡದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ನಿರ್ಮಾಣವಾದ ಒಂದು ವರ್ಷದಲ್ಲೇ ಹಾಳಾಗಿ ಹೋಗಿದ್ದು ಸಂಬಂಧ ಪಟ್ಟವರು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಎರಡು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅರ್ಜುಣಗಿ ತಾಂಡಾದಿಂದ ಬಡದಾಳ ಗ್ರಾಮದ ಮಾರ್ಗವಾಗಿ ೨ ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ನಿರ್ಮಿಸಿ ಒಂದು ವರ್ಷವಾಗಿಲ್ಲ ಈಗಲೇ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗಿದ್ದು ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಅರ್ಜುಣಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ತಾಂಡಾ ನಿವಾಸಿಗಳು ಆಸ್ಪತ್ರೆಗೆ, ಸಂತೆಗಾಗಿ ಮತ್ತು ಶಾಲಾ, ಕಾಲೇಜಿನ ವ್ಯಾಸಂಗಕ್ಕಾಗಿ ಬಡದಾಳ ಗ್ರಾಮಕ್ಕೆ ನಿತ್ಯ ಹೋಗಿ ಬರುತ್ತಾರೆ. ಅಲ್ಲದೆ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗುತ್ತಾರೆ. ಇವರಿಗೆಲ್ಲ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ನರಕಯಾತನೆ ಅನುಭವಿಸದಂತಾಗುತ್ತಿದೆ. ಕೂಡಲೇ ಸಂಬಂಧ ಪಟ್ಟವರು ಹಾಳಾದ ರಸ್ತೆ ಸುಧಾರಿಸುವ ಕೆಲಸ ಮಾಡಬೇಕು ಎಂದು ಎರಡು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

