ಗುಲಬರ್ಗಾ ವಿವಿ ಹಿಂದಿ ವಿಭಾಗಕ್ಕೆ ಪ್ರಥಮ ರ‍್ಯಾಂಕ್ | ರಾಜ್ಯಪಾಲರಿಂದ ಗೋಲ್ಡ್ ಮೆಡಲ್ ಪ್ರದಾನ
– ಮಲಿಕ್ ಎಲ್. ಜಮಾದಾರ
ವಿಜಯಪುರ: ಸಾಧನೆ ಸಾಧಕನ ಸ್ವತ್ತು. ನಿರಂತರ ಅಧ್ಯಯನ, ನಿರ್ದಿಷ್ಟ ಗುರಿಯಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಅನೀಲ ರಾಠೋಡ ಎಂಬ ಗ್ರಾಮೀಣ ಪ್ರತಿಭೆ ಸಾಕ್ಷಿಯಾಗಿದ್ದಾನೆ.
ಜಿಲ್ಲೆಯಿಂದ ಉನ್ನತ ವ್ಯಾಸಂಗಕ್ಕೆಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದೆಡೆಗೆ ಪಯಣ ಬೆಳೆಸಿದ ಅನೀಲ ರಾಠೋಡ ಸ್ನಾತಕೋತ್ತರ ಪದವಿ ಎಂ ಎ ಹಿಂದಿ ವಿಭಾಗ ಅಧ್ಯಯನಕ್ಕಾಗಿ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗೋಲ್ಡ್ ಮೆಡಲ್ ತನ್ನ ಮುಡಿಗೇರಿಸಿಕೊಂಡಿದ್ದಾನೆ.
ಇತ್ತೀಚೆಗೆ ಆ.೧೨ ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ ಸಭಾವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದ ರೈತ ರಾಜು ರಾಠೋಡ್ ಮಗನಾದ ಅನಿಲ್ ರಾಠೋಡ ‘ಚಿನ್ನದ ಪದಕ’ ಮತ್ತು ಪ್ರಮಾಣಪತ್ರವನ್ನು ಘನವೆತ್ತ ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಮೂಲತಃ ರೈತ ಮತ್ತು ಬಡ ಕುಟುಂಬದಲ್ಲಿ ಜನಿಸಿ ಈ ಸಾಧನೆಯ ಶೀಖರವೇರಿದ್ದು ನಿಜಕ್ಕೂ ಶ್ಲಾಘನೀಯ. ಇವನ ಈ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ.
ಅನೀಲನ ಈ ಸಾಧನೆಗೆ ಅಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಸಿ.ಎಸ್.ಐ.ಆರ್ ನಿರ್ದೇಶಕ ಪ್ರೊ.ಸುನಿಲ್ ಕುಮಾರ್ ಸಿಂಗ್, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯ ಪರಿಷತ್ತಿನ ಸದಸ್ಯರು ವಿವಿ ಯ ಬೋಧಕರು, ಬೋಧಕೇತರ ಸಿಬ್ಬಂದಿ ಸಾಕ್ಷಿಯಾಗಿದ್ದರು.

ಇದು ನನ್ನ ಕನಸಾಗಿತ್ತು. ಸತತ ಓದು, ಪರಿಶ್ರಮ, ನಿರ್ದಿಷ್ಟ ಗುರಿ, ಇದ್ದರೆ ಯಶಸ್ಸು ಸಿಗಲು ಸಾಧ್ಯ. ಅದರಂತೆ ನನ್ನ ಈ ಸಾಧನೆಗೆ ಮೂಲ ನನ್ನ ಹೆತ್ತ ತಂದೆ-ತಾಯಿ, ಗುರುಗಳು ಮತ್ತು ಸ್ನೇಹಿತರು ಕಾರಣ. ಶೈಕ್ಷಣಿಕವಾಗಿ ನನಗೆ ಬೆನ್ನೆಲುಬಾಗಿ ನಿಂತ ಇವರ ಈ ಸಹಕಾರದಿಂದ ಗೋಲ್ಡ್ ಮೆಡಲ್ ನ ಕನಸು ನನಸಾಯಿತು.”
– ಅನಿಲ್ ರಾಠೋಡ್
ಗೋಲ್ಡ್ ಮೆಡಲಿಸ್ಟ್

