ಹಂದಿಗನೂರ ತಾಂಡಾದಲ್ಲಿ “ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ” ಕುರಿತು ಅರಿವು ಕಾರ್ಯಕ್ರಮ
ವಿಜಯಪುರ: ಹೆಣ್ಣು ಮಕ್ಕಳು ಇಂದು ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದು, ತಾವು ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಶಿಕ್ಷಣದ ಮೂಲಕ ಮಾತ್ರವೇ ಇಂತಹ ಸಾಧನೆ ಸಾಧ್ಯವಾಗಿದೆ ಎಂದು ಡಾ.ಸುರೇಖಾ ರಾಠೋಡ ಹೇಳಿದರು.
ರವಿವಾರ ಸಮರ್ಥ ಸಂಸ್ಥೆ ವತಿಯಿಂದ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಂದಿಗನೂರ ತಾಂಡಾದಲ್ಲಿ “ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ” ವಿಷಯ ಕುರಿತು ಅರಿವು ಕಾರ್ಯದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಉನ್ನತ ಶಿಕ್ಷಣದ ಮೂಲಕವೇ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗಲು ಸಾಧ್ಯವೆಂದು ನುಡಿದ ಡಾ.ಸುರೇಖಾ ರಾಠೋಡ ಅವರು, ಇತ್ತೀಚಿನ ದಿನಗಳಲ್ಲಿ ತಾಂಡಾ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅದಕ್ಕೆ ಕಾರಣಗಳೇನು ಎಂಬುದರ ಕುರಿತು ವಿವರಿಸಿದರು.
ಶ್ರೀಮತಿ ಸಂಗೀತಾ ನಾಯಕ ಮಾತನಾಡಿ, ಹೆಣ್ಣುಮಕ್ಕಳು ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾಗ ತಾಂಡಾದ ಹೆಣ್ಣು ಮಕ್ಕಳು ಹಿಂದೆ ಉಳಿದುಕೊಳ್ಳಬಾರದು ಎಂದು ಸಲಹೆ ನೀಡಿದರು.
ತಾಂಡಾದ ಹಿರಿಯರಾದ ಪುಂಡಲೀಕ ರಾಠೋಡ, ಪಾಂಡು ರಾಠೋಡ, ಶಾಂತಾಬಾಯಿ ರಾಠೋಡ, ಸವಿತಾ ಚವ್ಹಾಣ, ಉಮೇಶ್ ಚವ್ಹಾಣ ಮತ್ತು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

