– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಪ್ರಸ್ತುತ ನಾವು ಬದುಕುತ್ತಿರುವ ಸಮಾಜದಲ್ಲಿ
ರಕ್ತದೊತ್ತಡ ಮಧುಮೇಹ ಥೈರಾಯಿಡ್ ಅಜೀರ್ಣ ಸಂಬಂಧಿ ಕಾಯಿಲೆಗಳು ಆಮ್ಲ ಪಿತ್ತ, ಹಾರ್ಮೋನುಗಳ ಅಸಮತೋಲನದಿಂದ ಆಗುವ ತೊಂದರೆಗಳಾದ ಥೈರಾಯಿಡ್, ಪಿಸಿಓಡಿ ಮುಂತಾದ ತೊಂದರೆಗಳಿಂದ ಜನರು ಬಳಲುತ್ತಿರುವುದನ್ನು ಕಾಣುತ್ತೇವೆ.
ಪ್ರಸ್ತುತ ದಿನಮಾನಗಳಲ್ಲಿ ಇವೆಲ್ಲವೂ ಸಾಮಾನ್ಯ ಕಾಯಿಲೆಗಳು ಎಂದು ಬಿಂಬಿತವಾಗಿರುವುದನ್ನು ಕೂಡ ನಾವು ಕಾಣುತ್ತಿದ್ದೇವೆ. ನಾವು ನಡೆಸುತ್ತಿರುವ ಜೀವನ ಶೈಲಿ ನಮ್ಮ ಈ ತೊಂದರೆಗಳಿಗೆ ಕಾರಣ ಎಂಬುದು ಬಹುತೇಕರ ವಾದ. ಪರಿಣಾಮವಾಗಿ ಜೀವಮಾನಪೂರ್ತಿ ನಾವು ಔಷಧಿ ಗುಳಿಗೆಗಳ ಮೇಲೆ ಅವಲಂಬಿತರಾಗುತ್ತೇವೆ.
ಆದರೆ ಈ ರೀತಿ ಔಷಧಿ ಗುಳಿಗೆಗಳ ಮೇಲೆ ಜೀವನವನ್ನು ನಡೆಸುವುದು ತಪ್ಪು ನಿರ್ಧಾರ ಎಂಬುದು ಜೀವನದ ಯಾವುದೋ ಒಂದು ಘಳಿಗೆಯಲ್ಲಿ ಮನುಷ್ಯನಿಗೆ ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿರುತ್ತದೆ.
ಯಾಕೆ ಹೀಗಾಗುತ್ತಿದೆ?? ಎಂಬುದು ಮಿಲಿಯನ್ ಡಾಲರ್ಗಳ ಪ್ರಶ್ನೆ.
ಯಾಕೆ ಈ ಆರೋಗ್ಯ ತೊಂದರೆಗಳ ಹಿಂದೆ ಭಾವನಾತ್ಮಕ ಆರೋಗ್ಯದ ಸಮಸ್ಯೆಯನ್ನು ಯಾರೂ ಗುರುತಿಸುತ್ತಿಲ್ಲ. ದೈಹಿಕ ಆರೋಗ್ಯ ಕೆಟ್ಟರೆ ಫಿಜಿಷಿಯನ್ಗಳ ಬಳಿಗೆ ತೆರಳುವ ನಾವು ಮಾನಸಿಕ ಆರೋಗ್ಯದ ಕುರಿತು ಯೋಚಿಸುವುದೇ ಇಲ್ಲ. ಮಾನಸಿಕ ವೈದ್ಯರ ಬಳಿ ಹೋಗುವುದರ ಕುರಿತು ಮಾತನಾಡಿದರೆ ನನಗೇನು ಹುಚ್ಚೆ!? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಮಾನಸಿಕ ಆರೋಗ್ಯದ ಕುರಿತು ನಮ್ಮಲ್ಲಿ ಇನ್ನೂ ಕೂಡ ಜಾಗೃತಿ ಮೂಡಿಲ್ಲ. ನಮ್ಮ ಬಹುತೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಅರಿವು ನಮಗಿಲ್ಲ.
ಭಾವನಾತ್ಮಕ ಆರೋಗ್ಯದ ಕುರಿತು ನಾವು ಕಾಳಜಿ ವಹಿಸಿದರೆ ನಮ್ಮ ದೈನಂದಿನ ಜೀವನದ ಭಾಗವಾಗಿರುವ ಕಾಯಿಲೆಗಳನ್ನು ನಮ್ಮ ಬದುಕಿನಿಂದ ಹೊರಹಾಕಬಹುದು. ಪರಿಣಾಮವಾಗಿ ನಮ್ಮ ಉಳಿದೆಲ್ಲ ಬದುಕನ್ನು ಸ್ವಸ್ಥ ತನು, ಮನಗಳ ಸಾಂಗತ್ಯದಲ್ಲಿ ಕಳೆಯಬಹುದು.
ಕಳೆದ ಹಲವಾರು ವರ್ಷಗಳಿಂದ ಯೋಗಾಸನವನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬರ ದೈಹಿಕ ಆರೋಗ್ಯ ಸುಸ್ಥಿರವಾಗಿದ್ದರೂ ಕೂಡ ವಯೋ ಸಹಜವಾಗಿ ರಕ್ತದೊತ್ತಡ ಕಾಡಿತು. ಪ್ರತಿ ಬಾರಿ ವೈದ್ಯರ ಬಳಿ ಹೋದಾಗಲೂ ರಕ್ತದೊತ್ತಡದ ವೈಪರೀತ್ಯಗಳು ಅವರ ದೇಹಕ್ಕಿಂತ ಹೆಚ್ಚಾಗಿ ಅವರ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿದ್ದವು.
ನನ್ನ ಅಪ್ಪ ಅಮ್ಮನಿಗೂ ರಕ್ತದೊತ್ತಡ ಇತ್ತು ಈಗ ನನಗೂ ರಕ್ತದೊತ್ತಡ ವಂಶ ಪಾರಂಪರ್ಯವಾಗಿ ಬಂದಿದೆ ಎಂದು ತುಸು ಹೆಚ್ಚೇ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳುತ್ತಿದ್ದ ಆ ವ್ಯಕ್ತಿ ಕರೋನಾ ಲಾಕ್ಡೌನ್ ನ ಸಮಯದಲ್ಲಿ ಯೋಗ ವ್ಯಾಯಾಮ ಮತ್ತು ವಾಕಿಂಗ್ ನ ಜೊತೆಗೆ ಪ್ರತಿದಿನ ಧ್ಯಾನಕ್ಕೆ ತೊಡಗಿದರು. ಕೆಲವೇ ದಿನಗಳಲ್ಲಿ ಧ್ಯಾನದ ಪರಿಣಾಮವಾಗಿ ಅವರ ಮಾನಸಿಕ ಸಂತುಲನ ದಿಂದಾಗಿ ಅವರ ರಕ್ತದೊತ್ತಡ ಕಡಿಮೆಯಾಯಿತು. ಮುಂದಿನ ಕೆಲವೇ ದಿನಗಳಲ್ಲಿ ಅವರು ತಮ್ಮ ರಕ್ತದೊತ್ತಡಕ್ಕೆ ಕಾರಣವಾಗುವ ಆಹಾರ, ಒತ್ತಡ, ಉದ್ವೇಗಗಳ ಮೇಲೆ ನಿಯಂತ್ರಣವನ್ನು ಹೊಂದಿ ಇದೀಗ ಮಾತ್ರೆಗಳಿಲ್ಲದೆ ರಕ್ತದೊತ್ತಡವನ್ನು ನಿರ್ವಹಿಸುತ್ತಿದ್ದಾರೆ.
ಮತ್ತೊಬ್ಬ ಹದಿಹರೆಯದ ಯುವಕ ವಯೋ ಸಹಜವಾಗಿ ಬೇಕರಿ ತಿಂಡಿಗಳತ್ತ ಆಕರ್ಷಿತನಾಗಿದ್ದು ತತ್ಪರಿಣಾಮದ ಬೊಜ್ಜು, ಆಲಸ್ಯಗಳು ಆತನಲ್ಲಿ ರಕ್ತದೊತ್ತಡ ಮತ್ತು ಮಧುಮೇಹವನ್ನು ಉಂಟುಮಾಡಿದ್ದವು. ಅನಾರೋಗ್ಯಕರ, ವ್ಯಾಯಾಮರಹಿತ ಜೀವನ ಶೈಲಿ, ಮೊಬೈಲ್ ಸ್ಕ್ರೀನ್ ಜಾಲಾಡುತ್ತಾ ಸಮಯ ಕಳೆಯುವಿಕೆ, ತಡ ರಾತ್ರಿ ಸಮಯದಲ್ಲಿ ಊಟ ಮತ್ತು ನಿದ್ರೆ ಕೆಲವೇ ವರ್ಷಗಳಲ್ಲಿ ಜೀರ್ಣ ಸಂಬಂಧಿ ತೊಂದರೆಗಳಿಗೆ ಒಳಗಾದ ಯುವಕ ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡನಲ್ಲದೇ ಯೋಗ, ಪ್ರಾಣಾಯಾಮ, ವೇಗದ ನಡಿಗೆ ಮತ್ತು ಜಾಗಿಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತೂಕದಲ್ಲಿ ನಿಯಂತ್ರಣ ತಂದುಕೊಳ್ಳುತ್ತಲೇ ಆತನ ಎಲ್ಲ ಜೀರ್ಣ ಸಂಬಂಧಿ ತೊಂದರೆಗಳು ಹೇಳ ಹೆಸರಿಲ್ಲದೆ ಹೊರಟುಹೋಗಿದ್ದವು.. ಮುಂದಿನ ಕೆಲವೇ ದಿನಗಳಲ್ಲಿ ಆತನಿಗೆ ಕಾಣಿಸಿಕೊಂಡ ರಕ್ತದೊತ್ತಡ ಮತ್ತು ಮಧುಮೇಹಗಳು ಕೂಡ ಓಡಿ ಹೋಗಿದ್ದವು.
ತಮ್ಮ ದೈನಂದಿನ ಜೀವನದಲ್ಲಿ
9 ಗಂಟೆಗಳ ನಿದ್ರೆ
8 ಗಂಟೆಗಳ ಕಾಲ ಕೆಲಸ
7 ಗ್ಲಾಸ್ ನೀರು ಸೇವನೆ
3 ಹೊತ್ತು ಸರಿಯಾದ ಸಮಯದಲ್ಲಿ ನಿಗದಿತ ಪ್ರಮಾಣದ ಊಟ ತಿಂಡಿಗಳನ್ನು ಸೇವಿಸುವುದು
2ಕ್ಕಿಂತ ಹೆಚ್ಚು ಹಣ್ಣುಗಳು ಪ್ರತಿದಿನದ ಆಹಾರದ ಒಂದು ಭಾಗವಾಗಿರುವುದು
ಹಸಿ ತರಕಾರಿಗಳ ಸೇವನೆ
ಇವುಗಳ ಜೊತೆಗೆ ಪ್ರತಿದಿನ ವ್ಯಾಯಾಮ, ವಾಕಿಂಗ್ ನಂತಹ ಉತ್ತಮ ಹವ್ಯಾಸಗಳು ಬ್ಯಾಡ್ಮಿಂಟನ್ ವಾಲಿಬಾಲ್ ಟೆಲಿಕಾಯ್ಟ್ ನಂತಹ ಆಟಗಳು, ಪ್ರಕೃತಿಯೊಂದಿಗೆ ನ ಒಡನಾಟ
ಕೆಲವೇ ನಿಮಿಷಗಳಲ್ಲಿ ಕ್ರಮಿಸಬಹುದಾದ ದೂರವನ್ನು ಕೂಡ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದರ ಬದಲು ಕಾಲ್ನಡಿಗೆ ಇಲ್ಲವೇ ಸೈಕಲ್ ಬಳಸುವುದು.
ಮನೆಯಲ್ಲಿ ಒಂದು ಪುಟ್ಟ ಉದ್ಯಾನವನ್ನು ಬಂದಿದ್ದು ಸಾಧ್ಯವಾದಷ್ಟು ಗಿಡಗಳ ಆರೈಕೆ ಮಾಡುವುದು ಇಲ್ಲವೇ ಸಾರ್ವಜನಿಕ ಉದ್ಯಾನ ಇಲ್ಲವೇ ಪ್ರಕೃತಿಯ ಮಡಿಲಾದ ಹೊಲಗದ್ದೆಗಳಲ್ಲಿ ತುಸು ಹೊತ್ತು ಸಮಯ ಕಳೆಯುವುದು.
ಧ್ಯಾನ ಮಾಡುವುದು… ಆರಂಭದಲ್ಲಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಸಾಧ್ಯವಾಗದೆ ಹೋದರೂ ನಿಧಾನವಾಗಿ ಈ ಅಭ್ಯಾಸವನ್ನು ರೂಢಿಸಿಕೊಂಡರೆ ಆಳವಾದ ಧ್ಯಾನವನ್ನು ಮಾಡುವ ಮೂಲಕ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದು. ಇದು ನಮ್ಮ ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರುವ ಮೂಲಕ ನರಗಳ ಉದ್ವೇಗವನ್ನು ಶಮನಗೊಳಿಸಿ ತನ್ಮೂಲಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.
ಇದೆಲ್ಲಕ್ಕಿಂತಲೂ ಮಿಗಿಲಾಗಿ…. ಬಸವಾದಿ ಪ್ರಮಥರು ಹೇಳಿರುವಂತೆ “ಬಾರದು ಬಪ್ಪದು, ಬಪ್ಪದು ತಪ್ಪದು “
ದಾಸರು ಹೇಳಿರುವ ” ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯೊಂದಿರಲಿ”
ಎಂಬಂತೆ ಬದುಕಿನಲ್ಲಿ ಬರುವ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಜೀವಿಸೋಣ. ಇದು ಮನಸ್ಸಿನ ನಿರಾಳತೆಗೆ ಕಾರಣವಾಗುತ್ತದೆ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ