ಉದಯರಶ್ಮಿ ದಿನಪತ್ರಿಕೆ
ಚಡಚಣ: ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಪ್ರತಿ ಹಳ್ಳಿಯಲ್ಲಿ ಸುರಿಯುತ್ತಿರುವ ವಿಪರೀತ ಮುಂಗಾರು ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ ಹಾಗಾಗಿ ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ ಐವತ್ತು ಸಾವಿರ (೫೦,೦೦೦) ರೂಪಾಯಿ ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ (೧೦೦೦೦೦) ರೂಪಾಯಿ, ಬಹು ವಾರ್ಷಿಕ ಬೆಳೆಗಳಿಗೆ ಎರಡು ಲಕ್ಷ (೨೦೦೦೦೦) ರೂಪಾಯಿ ರೈತರಿಗೆ ಪರಿಹಾರ ಕೊಡಬೇಕೆಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆಗ್ರಹ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಚಡಚಣ ತಾಲೂಕ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮಂಗಳವಾರದಂದು ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ ದ್ರಾಕ್ಷಿ ದಾಳಿಂಬೆ, ಲಿಂಬೆ, ಬಾಳೆಹಣ್ಣು ಸೇರಿದಂತೆ ಎಲ್ಲ ಬೆಳೆಗಳಲ್ಲಿ ನೀರು ನಿಂತು ಬೇರು ಕೊಳೆತು ಹಾಳಾಗಿವೆ ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ ೧೫ ದಿನದ ಒಳಗಾಗಿ ಜಿಲ್ಲೆಯ ಎಲ್ಲ ರೈತರಿಗೂ ಪರಿಹಾರ ಬರಲೇಬೇಕೆಂದು ರೈತ ಸಂಘಗಳಿಂದ ಒತ್ತಾಯ ಮಾಡಲಾಯಿತು.
ಫಸಲು ಭೀಮಾ ಯೋಜನೆಯ ವಿಮೇವೂ ಕೂಡ ಆದಷ್ಟು ಬೇಗನೆ ಕೊಡಬೇಕೆಂದರು
ತಾಲೂಕ ಅಧ್ಯಕ್ಷ ವಸಂತ ಬೈರಾಮಡಿ ಮಾತನಾಡಿ ವಿಜಯಪುರ ಜಿಲ್ಲೆಯಾದ್ಯಂತ ಭೀಮೆ, ಕೃಷ್ಣಾ ಹಾಗೂ ದೋಣಿಯ ಪ್ರವಾಹದಿಂದಾಗಿ ಸಾಕಷ್ಟು ರೈತರ ಕೃಷಿ ಭೂಮಿಗಳ ಬೆಳೆಗಳು ಹಾಳಾಗಿರುವ ಜೊತೆಗೆ ಮನೆಗಳು ಕೂಡ ಬಿದ್ದಿವೆ, ಹಲವಾರು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಇದಕ್ಕೂ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹ ಮಾಡಿದರು.ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಮಹಾದೇವ ಬನಸೋಡೆ ಮಾತನಾಡಿ ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ನಷ್ಟ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ ಆದರೆ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಅವರೆಲ್ಲರಿಗೂ ಮತ್ತೊಮ್ಮೆ ಸಮೀಕ್ಷೆ ಮಾಡಿ ಇಲ್ಲವೆ ಪಹಣಿ ಉತಾರಿಯಲ್ಲಿ ನಮೂದಿಸಿದ ಬೆಳೆಯ ವಿವರದಂತೆ ಅವರಿಗೂ ಪರಿಹಾರ ಕೊಡಿ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಚಡಚಣ ತಹಶೀಲ್ದಾರ ಎಸ್. ಬಿ. ಇಂಗಳೆ ಅವರು ಮೊದಲ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು, ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯತ, ತಲಾಠಿ ಕಚೇರಿ ಮುಂದೆ ಅಂಟಿಸಲಾಗಿದೆ. ರೈತರು ನಷ್ಟಗೊಂಡು ಉಳಿದಿದ್ದರೆ ಅಂಥವರು ದಾಖಲೆಗಳನ್ನು ಕೊಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮುರಗೇಂದ್ರ ಸಿಂಪಿ, ಗೇನಪ್ಪ ಬಿರಾದಾರ, ಶಿವಾನಂದ ಬಿರಾದಾರ, ಉಜ್ವಲ ಡೊಳ್ಳಿ, ಚನ್ನಪ್ಪ ಕುರ್ಲೆ, ರವೀಂದ್ರ ಕೇಶಟ್ಟಿ, ಮಹಾದೇವ ಕರಲಮಳ, ಲಾಯಪ್ಪ ವಾಘಮೋರೆ, ಭೀಮು ಕಡಮನಿ, ಪ್ರಕಾಶ ಬತಗುಣಕಿ, ಭೀಮಾಶಂಕರ ಉಮ್ರಾಣಿ, ಭಾಗಣ್ಣ ಕೋಳಿ, ಖಾನಗೊಂಡ ಪಾಟೀಲ, ರಮೇಶ ಕೋಳಿ, ಸಿದ್ರಾಮ ಕೋಳಿ, ಬಸವರಾಜ ಹೂಗಾರ, ಪುಟ್ಟು ತೇಲಿ ಸೇರಿದಂತೆ ರೈತರು ಇದ್ದರು.