ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕ್ರೀಡೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲು ಪ್ರಮುಖ ಪಾತ್ರವಹಿಸುತ್ತವೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ತಾಲೂಕಿನ ಮಸೂತಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ ಜರುಗಿದ ತಾಲೂಕು ಖೋ ಖೋ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ನಿರ್ಣಾಯಕರು ಎಲ್ಲ ಮಕ್ಕಳಿಗೂ ಸಮ ದೃಷ್ಟಿಯಿಂದ ಪ್ರಾಮಾಣಿಕ ನಿರ್ಣಯ ನೀಡಿ, ನಿಜವಾದ ಪ್ರತಿಭಾವಂತರನ್ನು ಗುರುತಿಸಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಕ್ರೀಡಾ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಕಾಗಲ್ ನೆರವೇರಿಸಿದರು. ಕೆ.ವಿ. ಕುಲಕರ್ಣಿ ಹಾಗೂ ಸಿ.ಪಿ. ಪಾಟೀಲ ಕ್ರೀಡಾ ಜ್ಯೋತಿಗೆ ಬೆಳಕು ನೀಡಿದರು.
ಪಂದ್ಯಾವಳಿಯನ್ನು ವಿವಿಧೋದ್ದೇಶ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಸಾಲಹಳ್ಳಿ ಉದ್ಘಾಟಿಸಿದರು. ರಾಷ್ಟ್ರೀಯ ಖೋ ಖೋ ಕ್ರೀಡಾಪಟು ಶ್ರಾವಣಿ ಸಾಲಳ್ಳಿ ಹಾಗೂ ಕ್ರೀಡಾಪಟುಗಳು ತಂದ ಕ್ರೀಡಾ ಜ್ಯೋತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದಕಣ್ಙ ಹರಿಜನ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಹಾಗೂ ಗಣ್ಯರು ಗೌರವಪೂರ್ವಕವಾಗಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂತೋಷ ಚನಗೊಂಡ, ಎಸ್.ಎಸ್. ಗೌರಿಮಠ, ಸಚೀನಗೌಡ ಪಾಟೀಲ, ಮೋಹನಗೌಡ ಪಾಟೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಬಿರಾದಾರ, ಪಿಡಿಒ ರಮೇಶ ನಡಗೇರಿ, ಹಾಗೂ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.