ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹೃದಯಾಘಾತದಿಂದ ನಿಧನರಾದ ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ಅಂತಿಮ ದರ್ಶನಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿರುವ ಅವರ ತೋಟದ ಮನೆಯ ರಂಗಾಶ್ರಯ ಸಭಾಭವನದಲ್ಲಿ ಮಂಗಳವಾರ ವ್ಯವಸ್ಥೆ ಮಾಡಲಾಗಿತ್ತು.
ಉತ್ತರ ಕರ್ನಾಟಕದ ಹಾಸ್ಯ ಲೋಕದ ದಿಗ್ಗಜ ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಶಾಶ್ವತವಾಗಿ ತಮ್ಮ ನಗುವನ್ನು ನಿಲ್ಲಿಸಿದ್ದಾರೆ. ಕಲಿಯುಗದ ಕುಡುಕ ಖ್ಯಾತಿಯ ರಂಗ ಕಲಾವಿದನ ಅಗಲಿಕೆ ಕನ್ನಡ ರಂಗಭೂಮಿಗೆ ತುಂಬಲಾಗದ ನಷ್ಟ.
ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರಕ್ಕೆ ಸಚಿವ ಶಿವಾನಂದ ಪಾಟೀಲ, ಹಿರಿಯ ನಟಿ ಉಮಾಶ್ರೀ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಮಾಜಿ ಶಾಸಕ ರಮೇಶ ಭೂಸನೂರ, ಎ.ಎಸ್.ಪಾಟೀಲ ನಡಹಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ರಾಜಶೇಖರ ಕೂಚಬಾಳ, ಬಾಲ್ಯ ಸ್ನೇಹಿತ ಸಿದ್ದಣ್ಣ, ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ, ರಂಗಭೂಮಿ ಕಲಾವಿದರಾದ ಪ್ರೇಮಾ ಗುಳೇದಗುಡ್ಡ, ಸಿದ್ದು ನಾಲತವಾಡ, ಶಬ್ಬಿರ್ ಡಾಂಗೆ, ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಬಸವ ಕೇಂದ್ರ ನಾನಾಗೌಡ ಪಾಟೀಲ, ಸಿದ್ದಲಿಂಗ ಚೌಧರಿ ಸೇರಿದಂತೆ ಅವರ ಅಭಿಮಾನಿಗಳು, ಸ್ನೇಹಿತರು, ಕಲಾ ಬಂಧುಗಳು, ಕುಟುಂಬವರ್ಗ ತಾಲೂಕಿನ ವಿವಿಧ ಗ್ರಾಮಸ್ಥರು, ಹಿರಿಯರು, ಮುಖಂಡರು ಅಂತಿಮ ಗೌರವ ನಮನ ಸಲ್ಲಿಸಿದರು.
ಸಿಂದಗಿ ಕನ್ನಡ ಸಾಹಿತ್ಯ ಗೆಳೆಯರ ಬಳಗ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಂಗಭೂಮಿಯ ಪ್ರತಿಭಾನ್ವಿತ ಕಲಾವಿದ ರಾಜು ತಾಳಿಕೋಟಿ ಅವರು ಎಲ್ಲರನ್ನೂ ತಮ್ಮ ಹಾಸ್ಯದ ಮಾತುಗಳಿಂದ ನಗಿಸುತ್ತಾ ತಾವು ನಗುತ್ತಲೇ ನಮ್ಮಿಂದ ಅಗಲಿದ್ದಾರೆ. ರಾಜು ತಾಳಿಕೋಟೆ ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.
ಈ ವೇಳೆ ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ, ಶಾಸಕ ಅಶೋಕ ಮನಗೂಳಿ, ಸಿ.ಎಸ್.ನಾಡಗೌಡ, ಎ.ಎಸ್.ಪಾಟೀಲ ನಡಹಳ್ಳಿ, ನಾನಾಗೌಡ ಪಾಟೀಲ, ವಾಯ್.ಸಿ.ಮಯೂರ, ರಾಜಶೇಖರ ಕೂಚಬಾಳ, ರಂಗಾಯಣ ನಿರ್ದೇಶಕ ಬುದ್ದಣ್ಣ ಮಾದಳ್ಳಿ, ಬಿ.ಎಎಸ್.ಪಾಟೀಲ ಯಾಳಗಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಹಾಸ್ಯ ಕಲಾವಿದರಾಗಿ, ಸಮಾಜ ಸೇವಕರಾಗಿ, ಎಲ್ಲರನ್ನೂ ಒಟ್ಟಾಗಿ ಕೆದುಕೊಂಡು ಒಮದಾಗಿ ಬಾಳಬೇಕೆನ್ನುವ ಜಾತಿ ಮತ ಪಂಥಗಳನ್ನು ಮೀರಿ ಬೆಳೆದ ರಾಜು ತಾಳಿಕೋಟಿಯವರ ಹೆಸರು ಚಿರಸ್ಥಾಯಿಯಾಗೂಳಿಯಲು ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
“ರಂಗಭೂಮಿಯಲ್ಲಿ ದುಡಿದು ಸ್ವಂತ ತಾನೇ ಮಾಲೀಕನಾಗಿ ಕಂಪನಿ ಕಟ್ಟಿ ಹಲವಾರು ಕಲಾವಿದರಿಗೆ ಬದುಕು ಕಟ್ಟಿಕೊಟ್ಟ ರಾಜು ತಾಳಿಕೋಟಿ ಅವರ ಬದುಕು ಇತರ ಕಲಾವಿದರಿಗೆ ಮಾದರಿ. ರಂಗ ಕಲಾವಿದರಾಗಿ ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ಥರವಾದ ದಿನಮಾನಗಳಲ್ಲಿ ಹಗಲಿರುಳು ದುಡಿದು ಮಡದಿ ಮಕ್ಕಳಿಗೆ ಆಸ್ತಿ ಮಾಡಿ ಬಿಟ್ಟು ಹೋದ ಹಲವೇ ಕಲಾವಿದರಲ್ಲಿ ರಾಜು ತಾಳಿಕೋಟಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರದು ಸಾಯುವ ವಯಸ್ಸಲ್ಲ. ವೃತ್ತಿ ಬದುಕು ಹಾಗೂ ಕೃಷಿ ರಂಗದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆಂಬ ತುಡಿತವಿಟ್ಟುಕೊಂಡಿದ್ದ ರಾಜುನ ನಿಧನ ತುಂಬಲಾರದ ನಷ್ಟ.”
– ಉಮಾಶ್ರೀ
ಹಿರಿಯ ನಟಿ, ರಂಗ ಕಲಾವಿದೆ

ಪಾರ್ಥಿವ ಶರೀರದ ಮೆರವಣಿಗೆ
ಸಂಜೆ ವೇಳೆಯಾಗುತ್ತಿದ್ದಂತೆ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನವನ್ನು ಅಂತ್ಯಗೊಳಿಸಿ ಚಿಕ್ಕಸಿಂದಗಿಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅವರ ತೋಟದಿಂದ ಚಿಕ್ಕಸಿಂದಗಿ ಖಬರಸ್ಥಾನವರೆಗೆ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ಚಿಕ್ಕಸಿಂದಗಿ ಗ್ರಾಮದಿಂದ ಸು.೩ಕಿಮೀ ದೂರದಲ್ಲಿರುವ ಖಬರಸ್ಥಾನದಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಇಸ್ಲಾಂ ಧರ್ಮದ ವಿಧಿವಿಧಾನಗಳಂತೆ ಕುಟುಂಬಸ್ಥರು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.