ನಾನು ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ ಎಂದ ಡಿಕೆಶಿ | ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಡಿ.ಕೆ ಶಿವಕುಮಾರ್ ಕೌಂಟರ್!
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಸಂಖ್ಯಾಬಲದಿಂದ ನಿರ್ಧಾರವಾಗುವುದಿಲ್ಲ, ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಆಯ್ಕೆಯಲ್ಲಿ ಯಾರ ತೀರ್ಮಾನ ನಿರ್ಣಾಯಕ ಎಂಬ ವಿಷಯದ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಕೌಂಟರ್ ನೀಡಿದ್ದಾರೆ. ಮುಖ್ಯಮಂತ್ರಿಯಾಗಲು ಶಾಸಕರ ಬಲ ಮುಖ್ಯವಲ್ಲ. ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ ಮಾಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿವಾಹಿನಿಗೆ ಇತ್ತೀಚೆಗೆ ಸಂದರ್ಶನ ನೀಡಿದ್ದ ಶಿವಕುಮಾರ್, ಶಾಸಕರ ಬಲಾಬಲದ ಮೇಲೆ ಮುಖ್ಯಮಂತ್ರಿ ಸ್ಥಾನ ನಿರ್ಧಾರ ಆಗುವುದಿಲ್ಲ. ಹೈಕಮಾಂಡ್ ಮಾತೇ ಅಂತಿಮ. ವರಿಷ್ಠರು ಹೇಳಿದ್ದನ್ನು ಕೇಳಬೇಕು. ಹೈಕಮಾಂಡ್‌ನವರು ಏನು ಕೆಲಸ ಕೊಡುತ್ತಾರೊ ಅದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದಿದ್ದರು. ನವೆಂಬರ್‌ನಲ್ಲಿ ಯಾವುದೇ ಕ್ರಾಂತಿಯಿಲ್ಲ.
ಅದೆಲ್ಲವೂ ಸೃಷ್ಟಿಯಷ್ಟೆ. ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲಿಯೇ ಆಗುತ್ತವೆ. ಸಂಖ್ಯಾಬಲದಿಂದ ಯಾವುದೂ ನಿರ್ಧಾರವಾಗುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ. ಯಾರನ್ನು ಎಲ್ಲಿಡಬೇಕು, ಯಾವಾಗ ಸ್ಥಾನಮಾನ ನೀಡಬೇಕು, ಎಷ್ಟು ದಿನ ಕೊಡಬೇಕು ಎಂಬುದನ್ನೂ ಸಹ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ನನಗೆ ಪಕ್ಷದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ನಮ್ಮ ಅಧಿಕಾರ, ಜವಾಬ್ದಾರಿ ಬಗ್ಗೆ ತಿಳಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ನಾನು ಉಪಮುಖ್ಯಮಂತ್ರಿಯಾಗಿರಬೇಕು ಎಂದು ಹೇಳಿದರು. ನಾವು ಅದರಂತೆ ಒಪ್ಪಿಕೊಂಡು ಬಂದು ಈಗ ಕೆಲಸ ಮಾಡುತ್ತಿದ್ದೇವೆ.
ಉಳಿದ ಚರ್ಚೆಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚಿಸುವ ಅವಶ್ಯಕತೆಯಿಲ್ಲ. ದೆಹಲಿ ನಾಯಕರು ನನಗೆ ವಹಿಸಿರುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ನಾನು ಈವರೆಗೆ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಕಾಂಗ್ರೆಸ್‌ನ 140 ಶಾಸಕರು ನನಗೆ ಬೇಕಾದವರೇ. ನನಗೆ ಯಾರೂ ಜೈಕಾರ ಹಾಕುವುದು ಬೇಡ. ನನಗೆ ಹಿಂಬಾಲಕರೂ ಬೇಡ. ಹೈಕಮಾಂಡ್ ಹೇಳಿದಂತೆ ನಾನು ಕೇಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

“ಹೈಕಮಾಂಡ್ ಆಶೀರ್ವಾದವೂ ಬೇಕು. ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಆಗುವುದಿಲ್ಲ. ಬಹುಮತ ಇದ್ದರೆ ಆಗಬಹುದು. ಔತಣಕೂಟಕ್ಕೂ ಸಂಪುಟ ಪುನರ್ ರಚನೆಗೂ ಯಾವುದೇ ಸಂಬಂಧ ಇಲ್ಲ. ಆಗಾಗ ಊಟಕ್ಕೆ ಕರೆಯುತ್ತೇನೆ. ಊಟಕ್ಕೆ ಕರೆದಿದ್ದರಲ್ಲಿ ಯಾವುದೇ ವಿಶೇಷವಿಲ್ಲ. ನಿಮಗೆ (ಮಾಧ್ಯಮ) ಹಾಗೂ ಬಿಜೆಪಿಯವರಿಗೆ ವಿಶೇಷವಾಗಿದೆ.”
– ಸಿದ್ದರಾಮಯ್ಯ
ಮುಖ್ಯಮಂತ್ರಿ