ಬಿ. ಎಲ್. ಡಿ. ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯ ತಿಕೋಟಾದಲ್ಲಿ ಸಂಗೊಳ್ಳಿ ರಾಯಣ್ಣ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಾಷ್ಟ್ರದ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣ ಬ್ರಿಟಿಷರೊಂದಿಗೆ ಅಧಿಕಾರಕ್ಕಾಗಿ ಹೋರಾಡಲಿಲ್ಲ. ಆತ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ, ತಾಯ್ನೆಲದ ರಕ್ಷಣೆಗಾಗಿ ಹೋರಾಟ ಮಾಡಿರುವುದನ್ನು ನಾವೆಲ್ಲ ಅರಿತುಕೊಳ್ಳಬೇಕು ಎಂದು ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಿಗೇರಿ ಅವರು ಹೇಳಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸ ಬಿ. ಎಲ್. ಡಿ. ಇ ಸಂಸ್ಥೆಯ ತಿಕೋಟಾ ಪಟ್ಟಣದಲ್ಲಿನ ನೂತನ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಕೇವಲ 32 ವರ್ಷ ಕಾಲ ಜೀವಿಸಿದರೂ ಆತನ ಜೀವನ ಸಾಧನೆ ನೂರಾರು ವರ್ಷಗಳ ನಂತರವೂ ಸ್ಮರಣೆ ಮಾಡುತ್ತಿರುವುದು ರಾಯಣ್ಣನ ಅಪ್ರತಿಮ ರಾಷ್ಟ್ರಪ್ರೇಮಕ್ಕೆ ನಿದರ್ಶನವಾಗಿದೆ. ರಾಯಣ್ಣನಿಗೆ ತನ್ನ ತಂದೆ ಮತ್ತು ಅಜ್ಜನ ಶೌರ್ಯ, ಧೈರ್ಯ, ಪರಾಕ್ರಮ ರಕ್ತಗತವಾಗಿ ಬಂದಿದ್ದನ್ನು ನಾವು ಕಾಣುತ್ತೇವೆ. ಕಿತ್ತೂರಿನ ಸಂಸ್ಥಾನದಲ್ಲಿ ರಾಣಿ ಚೆನ್ನಮ್ಮಳ ಆಪ್ತರಕ್ಷಕನಾಗಿ ತನ್ನ ಜೀವವನ್ನೇ ಕಿತ್ತೂರಿನ ಸಂಸ್ಥಾನಕ್ಕೆ ಅಷ್ಟೇ ಅಲ್ಲದೆ ಇಡೀ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನು ಬಲಿದಾನ ಗೈದಿರುವುದು ನಮ್ಮೆಲ್ಲರಿಗೂ ಸ್ಪೂರ್ತಿ ಮತ್ತು ಆದರ್ಶಮಯವಾಗಿರುವಂಥದ್ದು. ಇವತ್ತು ನಮ್ಮೆದುರಿಗೆ ರಾಯಣ್ಣ ಇಲ್ಲದೆ ಇದ್ದರೂ ಆತನ ದೇಶಪ್ರೇಮ, ತಾಯ್ನೆಲದ ಪ್ರೀತಿ, ಅಭಿಮಾನ, ತ್ಯಾಗ ಹೆಚ್ಚಾಗಿ ಬಲಿದಾನ ಇವೆಲ್ಲವೂ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು, ರಾಷ್ಟ್ರಭಕ್ತಿ ದೇಶಪ್ರೇಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ಸಂಯೋಜಕರಾದ ಡಾ.ಹನುಮಂತಪ್ಪ ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ,
ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ರವಿ ದಳವಾಯಿ ಅವರು ಮಾತನಾಡಿ, ನಮ್ಮ ಅಧ್ಯಯನ ಪೀಠದ ವತಿಯಿಂದ ಬೆಳಗಾವಿ ಮತ್ತು ವಿಜಯಪುರ ಜಿಲ್ಲಾ ವ್ಯಾಪ್ತಿಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಸಂಗೊಳ್ಳಿ ರಾಯಣ್ಣನ ದೇಶಭಕ್ತಿ ರಾಷ್ಟ್ರಪ್ರೇಮದ ಅರಿವು ಮೂಡಿಸುವ ಉದ್ದೇಶದೊಂದಿಗೆ ಇಂತಹ ಸರಣಿ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಿದ್ದೇವೆ. ಈ ಸರಣಿ ಉಪನ್ಯಾಸ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳಾದವರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ.ಎಸ್. ತೋಳನೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಬಿ. ಎಸ್. ಬೆಳಗಲಿ, ಎನ್ ಎಸ್ ಎಸ್ ಅಧಿಕಾರಿ ಡಾ.ಕೃಷ್ಣಮೂರ್ತಿ ಸಿ. ಎನ್, ಡಾ. ಹನುಮಂತಪ್ಪ, ಕಾಲೇಜಿನ ಅಧೀಕ್ಷಕ ಎಸ್.ಎ.ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕು.ರಕ್ಷಿತಾ ಪ್ರಾರ್ಥಿಸಿದರು, ಪ್ರೊ. ಬಿ.ಎಸ್ ಬೆಳಗಲಿ ಸ್ವಾಗತಿಸಿದರು, ಡಾ. ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.