ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶದಲ್ಲಿ 1925 ರಲ್ಲಿ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡಬೇಕೆಂಬ ಸದುದ್ದೇಶದಿಂದ ಡಾ.ಹೆಗಡೆವಾರ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅಸ್ತಿತ್ವಕ್ಕೆ ತಂದರು. ಈ ಧ್ಯೇಯ ಹೊಂದಿರುವ ಸಂಘವು ಇಂದು ಏಕಭಾರತ ಶ್ರೇಷ್ಠ ಭಾರತ ಎಂಬ ದಿಟ್ಟೆ ಹೆಜ್ಜೆ ಇಟ್ಟಿದೆ ಎಂದು ಆರ್.ಎಸ್.ಎಸ್. ಪ್ರಾಂತ ಕಾರ್ಯಕಾರಿಣಿ ಸದಸ್ಯ ನಾಗೇಶ ಚಿನ್ನಾರೆಡ್ಡಿ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಇತಿಹಾಸ ಪ್ರಜ್ಞೆಯೊಂದಿಗೆ ಡಾ.ಹೆಗಡೆವಾರ ಅವರು ಈ ಸಂಘದ ಸ್ಥಾಪನೆ ಮಾಡುವ ಮೂಲಕ ದೇಶದಲ್ಲಿ ಸ್ವಯಂ ಸೇವಕರು ದೇಶದ ಸ್ವಾತಂತ್ರ್ಯ, ರಕ್ಷಣೆಗಾಗಿ, ಹಿಂದು ಸಮಾಜದ ಸಂರಕ್ಷಣೆಗಾಗಿ ಮೌನ ತಪಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಪಾತ್ರ ವಹಿಸಿದ್ದನ್ನು ಕಾಣುತ್ತೇವೆ. ದೇಶದ ಪ್ರತಿಯೊಬ್ಬರ ಅಂತಃಕರಣದಲ್ಲಿ ದೇಶದ ವೈಭವ, ದೇಶ ಭಕ್ತಿ ಬರಬೇಕು. ಗುಣವಿಕಾಸ ಹೊಂದಬೇಕು. ಸಮಾಜದಲ್ಲಿರುವ ಎಲ್ಲರೂ ನನ್ನವರು ಎಂಬ ಭಾವ ಬರಬೇಕೆಂಬ ಉದ್ದೇಶ ಸೇರಿದಂತೆ ಸದುದ್ದೇಶಗಳೊಂದಿಗೆ ಸಂಘವು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ನೂರು ವರ್ಷದಲ್ಲಿ ಸಂಘವು ಸಮಾಜದಲ್ಲಿ ಆತ್ಮಜ್ಞಾನ, ಆತ್ಮವಿಶ್ವಾಸ, ಆತ್ಮಗೌರವ ಮೂಡಿಸಿದೆ. ಹಿಂದು ಸಂಸ್ಕ್ರತಿ, ಸಂಸ್ಕಾರಕ್ಕೆ ಯಾವುದೇ ಸವಾಲು ಬಂದರೂ ಅಮೂಲಗ್ರವಾಗಿ ಅದನ್ನು ಕಿತ್ತು ಹಾಕಲು ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಸದ್ಗುಣಗಳು ವಿಕಾಸವಾಗುವಂತೆ ಮಾಡಿದೆ. ಹಿಂದು ಸಂಘಟಿತ ಸಶಕ್ತ ಭಾರತವನ್ನು ನಿರ್ಮಾಣ ಮಾಡಲು ಹೊರಟಿದೆ. ದೇಶದ ಹಿತ ಕಾಪಾಡುವಲ್ಲಿ ಸದಾ ನಿರತವಾಗಿದೆ. ಇಂತಹ ಸಂಘವನ್ನು ರಾಜ್ಯದ ಒರ್ವ ಮಂತ್ರಿಯೊಬ್ಬರು ಆತಂಕವಾದಿ ಸಂಘಟನೆ ಎಂದು ಹೇಳಿರುವದು ವಿಷಾದಕರ ಸಂಗತಿ. ಇಂತಹವರು ತಮ್ಮ ಸ್ವಾರ್ಥಕ್ಕಾಗಿ, ಸಮಾಜದ ವಿಭಜನೆಗೆ ಮುಂದಾಗುತ್ತಿದ್ದಾರೆ. ಸಂಘವು ಸಮೃದ್ಧ ಸಮಾಜ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದೆ. ಇದಕ್ಕೆ ಎಲ್ಲ ಬಾಂಧವರು ಕಟ್ಟಿಬದ್ಧರಾಗಬೇಕಿದೆ ಎಂದರು.
ಇಂದು ಕೌಟುಂಬಿಕದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ. ನಾವೆಲ್ಲರೂ ಕೌಟುಂಬಿಕ ಮೌಲ್ಯಗಳ ರಕ್ಷಣೆ ಮಾಡುವಂತಾಗಬೇಕು. ವಿದೇಶಿ ಸಂಸ್ಕ್ರತಿಗೆ ಮಾರು ಹೋಗದೇ ದೇಶೀಯ ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಸಮಾಜ ನಿರ್ಮಾಣಕ್ಕೆ ಸಾಮರಸ್ಯ ಅಗತ್ಯವಿದೆ. ಸ್ವದೇಶ ಜೀವನ ಚಿಂತನೆ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ, ಕರ್ತವ್ಯದ ನಿರ್ವಹಣೆ ಸೇರಿದಂತೆ ದೇಶದ ಹಿತಕ್ಕಾಗಿ ಅನೇಕ ಸಂಗತಿಯನ್ನು ಅರಿತು ನಡೆಯಬೇಕಿದೆ ಎಂದರು.
ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಮಾಜಿ ಸೈನಿಕ ಶಿವಾನಂದ ಅಡಗಿಮನಿ ಮಾತನಾಡಿ, ಆರ್.ಎಸ್.ಎಸ್. ಸಂಘವು ಶಿಸ್ತಿಗೆ ಹೆಸರಾಗಿದೆ. ಇದರಿಂದ ಜೀವನದಲ್ಲಿ ನಾವೆಲ್ಲರೂ ಉತ್ತಮ ಜೀವನ ಸಾಗಿಸುವದರೊಂದಿಗೆ ದೇಶದ ಹಿತಕ್ಕಾಗಿ ಚಿಂತನೆ ಮಾಡಲು ಪೂರಕವಾಗಿದೆ ಎಂದರು.
ಈಶ್ವರ ಹಳ್ಳಿ ಪ್ರಾರ್ಥಿಸಿದರು. ಅಮೃತ ವಚನವನ್ನು ಈಶ್ವರ ಪರಮಗೊಂಡ ವಾಚಿಸಿದರು. ಡಾ.ಬಸವರಾಜ ಚವ್ಹಾಣ ಸ್ವಾಗತಿಸಿ,ನಿರೂಪಿಸಿದರು. ಅಮೃತ ಯಾದವ ವಂದಿಸಿದರು. ಕಾರ್ಯಕ್ರಮ ಮುನ್ನು ಭಗವಾ ಧ್ವಜಾರೋಹಣ ನೆರವೇರಿದ ನಂತರ ಭಗವಾ ಧ್ವಜಕ್ಕೆ ಗೌರವ ಸಲ್ಲಿಸಿಲಾಯಿತು. ನಂತರ ಭಗವಾ ಧ್ವಜಾವರೋಹಣ ಮಾಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತ್ತು. ಬಹಿರಂಗ ಸಭೆಯ ಮುನ್ನ ಬಸವೇಶ್ವರ ಅಂತರಾಷ್ಟ್ರೀಯ ಶಾಲೆಯ ಮುಂಭಾಗದಿಂದ ಆರಂಭವಾದ ಭವ್ಯ ಪಥಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಹಿರಂಗ ಸಭೆಯ ನಡೆಯುವ ಸ್ಥಳಕ್ಕೆ ಆಗಮಿಸಿತು.