ಗುತ್ತಿಗೆದಾರನಿಂದ ಲಂಚ ಪಡೆವಾಗ ಲಾಕ್ | ಮನೆ ಮೇಲೂ ದಾಳಿ | ಲಕ್ಷಾಂತರ ಮೌಲ್ಯದ ಚಿನ್ನಾಭರಣ ರೂ.30 ಲಕ್ಷ ನಗದು ಪತ್ತೆ
ಮುದ್ದೇಬಿಹಾಳ: ಗುತ್ತಿಗೆದಾರರೊಬ್ಬರು ದೂರು ನೀಡಿದ್ದ ಹಿನ್ನೆಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕುಡಿವ ನೀರಿನ ಕಾಮಗಾರಿಗೆ ಸಂಬAಧಿಸಿದAತೆ ಬಿಲ್ ಬರೆಯಲು ೩೦ ಸಾವಿರ ರೂ.ಲಂಚ ಪಡೆದುಕೊಳ್ಳುತ್ತಿರುವಾಗ ಮಂಗಳವಾರ ಆರ್.ಡಬ್ಲೂ.ಎಸ್ ಇಲಾಖೆ ಎಇಇ ಜೆ.ಪಿ.ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಲೋಕಾಯುಕ್ತ ಅಧಿಕಾರಿಗಳು ಅವರ ಮನೆಯ ಮೇಲೂ ದಾಳಿ ಮಾಡಿದ್ದು ಲಕ್ಷಾಂತರ ರೂ.ಹಣ ಮತ್ತು ಚಿನ್ನಾಭರಣ, ಮಹತ್ವದ ಬ್ಯಾಂಕ್ ಖಾತೆಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಳಿಕೋಟಿ ತಾಲೂಕಿನ ಖ್ಯಾತನಡೋಣಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಕುಡಿವ ನೀರಿನ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರೊಬ್ಬರು ೧೬ ಲಕ್ಷ ರೂ. ಬಿಲ್ ಪಾವತಿಸುವಂತೆ ಜೆ.ಪಿ.ಶೆಟ್ಟಿ ಅವರನ್ನು ಕೋರಿದ್ದರು. ಇದಕ್ಕೆ ಶೇ.೩ ರಷ್ಟು ಕಮೀಷನ್ ಕೊಡಬೇಕು ಎಂಬ ಬೇಡಿಕೆಯನ್ನು ಅಧಿಕಾರಿ ಶೆಟ್ಟಿ ಇರಿಸಿದ್ದರು ಎನ್ನಲಾಗಿದೆ. ಅದರಂತೆ ೬೦ ಸಾವಿರ ರೂ.ಪೈಕಿ ೩೦ ಸಾವಿರ ಗುತ್ತಿಗೆದಾರರು ಕೊಟ್ಟಿದ್ದರು. ಮಂಗಳವಾರ ಮತ್ತೆ ೩೦ ಸಾವಿರ ರೂ.ಗಳನ್ನು ಹುಡ್ಕೋದಲ್ಲಿರುವ ಆರ್.ಡಬ್ಲೂö್ಯ.ಎಸ್ ಕಚೇರಿಯಲ್ಲಿ ಶೆಟ್ಟಿ ಅವರು ಗುತ್ತಿಗೆದಾರನಿಂದ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅವರನ್ನು ಟ್ರಾö್ಯಪ್ ಮಾಡಿದ್ದಾರೆ.
ದಾಳಿಯ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ಅವರು, ಗುತ್ತಿಗೆದಾರರೊಬ್ಬರಿಗೆ ಸೇರಿದ ಎರಡು ಕಾಮಗಾರಿಗಳ ಬಿಲ್ ಪಾಸ್ ಮಾಡುವ ಸಂಬAಧ ಹಣ ನೀಡುವಂತೆ ಅಧಿಕಾರಿ ಜೆ.ಪಿ.ಶೆಟ್ಟಿ ಬೇಡಿಕೆ ಇರಿಸಿದ್ದರು. ಬೇಡಿಕೆ ಇರಿಸಿದಂತೆ ೩೦ ಸಾವಿರ ರೂ.ಪಡೆದುಕೊಳ್ಳುವಾಗ ಅವರು ಸಿಕ್ಕು ಬಿದ್ದಿದ್ದಾರೆ. ದೈಹಿಕ ಪರಿಶೀಲನೆಗೊಳಪಡಿಸಿದಾಗ ೩೨ ಸಾವಿರ ಹೆಚ್ಚುವರಿಯಾಗಿ ಪತ್ತೆಯಾಗಿವೆ. ಮನೆಯ ಮೇಲೆ ದಾಳಿ ಮಾಡಿದಾಗ ಅಂದಾಜು ೩೦ ಲಕ್ಷ ರೂ.ಹಣ ನಗದು ರೂಪದಲ್ಲಿ ಪತ್ತೆಯಾಗಿದೆ. ಚಿನ್ನಾಭರಣ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕಗಳು ದೊರೆತಿದ್ದು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಯಕ, ಪಿಎಸೈ ಆನಂದ ಟಕ್ಕಣ್ಣವರ, ಆನಂದ ಡೋಣಿ, ಸಿಬ್ಬಂದಿ ಶಂಕರ ಲಮಾಣಿ, ಗುರುಪ್ರಸಾದ ಹಡಪದ, ಸಂತೋಷ ಅಮರಖೇಡ, ಈರಣ್ಣ ಕೊಣ್ಣೂರ, ಮಹೇಶ ಪೂಜಾರಿ, ಸಾಬು ಮುಂಜೆ, ಅಕ್ಬರ ಗೋಲಗೇರಿ, ವಸೀಂ ಅಕ್ಕಲಕೋಟ, ಮಾಳಪ್ಪ ಸಲಗೊಂಡ, ಅಶೋಕ ಚವ್ಹಾಣ, ಸಂತೋಷ ಚವ್ಹಾಣ, ಆನಂದ ಪಡಶೆಟ್ಟಿ ಹಾಗೂ ಬಾಗಲಕೋಟ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಒಟ್ಟು ನಾಲ್ಕು ವಾಹನಗಳಲ್ಲಿ ಲೋಕಾಯುಕ್ತ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮಂಗಳವಾರ ಮದ್ಯಾಹ್ನವೇ ಮುದ್ದೇಬಿಹಾಳಕ್ಕೆ ಆಗಮಿಸಿ ಅಧಿಕಾರಿ ಶೆಟ್ಟಿ ಅವರನ್ನು ಬಲೆಗೆ ಕೆಡವಿದ್ದಾರೆ. ಬಳಿಕ ಅವರನ್ನು ಬಂಧಿಸಿ ಅವರ ಮನೆಯವರ ಸಮ್ಮುಖದಲ್ಲಿ ಮನೆಯನ್ನೂ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮನೆಯ ಬೆಡ್ ರೂಂನಲ್ಲಿ ಬೆಡ್ ಕೆಳಗಡೆ ಲಕ್ಷಾಂತರ ರೂ.ನಗದು ಹಣ ದೊರೆತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಸಂಜೆಯವರೆಗೂ ದಾಳಿಯ ಕುರಿತು ಸಣ್ಣ ಸುಳಿವೂ ಕೂಡಾ ಅಧಿಕಾರಿಗಳು ಬಿಟ್ಟುಕೊಟ್ಟಿರಲಿಲ್ಲ ಎನ್ನುವುದು ವಿಶೇಷ.