ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೊಂಡಗೂಳಿ ಹಾಗೂ ಹಂಚಲಿ ಗ್ರಾಮ ವ್ಯಾಪ್ತಿಯಲ್ಲಿ ಕಾಲುವೆ ಕಾಮಗಾರಿ ಮಾಡದ ಕುರಿತು ಇಂಡಿ ಕೃಷ್ಣಾ ಮೇಲ್ದಂಡೆ ಯೋಜನಾ ಕಛೇರಿ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೊಂಡಗೂಳಿ ಹಾಗೂ ಹಂಚಲಿ ಗ್ರಾಮಗಳ ರೈತರು ಸೋಮವಾರ ಇಂಡಿ ಪಟ್ಟಣದ ಕೃಷ್ಣಾ ಮೇಲ್ದಂಡೆ ಯೋಜನಾ ಕಚೇರಿಗೆ ತೆರಳಿ ತಮ್ಮ ಸಮಸ್ಯೆ ಕುರಿತು ಗಮನ ಸೆಳೆದರು. ಈ ಸಂದರ್ಭದಲ್ಲಿ ಟಿ.ಎಸ್.ಹೆಬ್ಬಾಳ ಮಾತನಾಡಿ, ಜಮೀನಿನಲ್ಲಿ ೩ ವರ್ಷಗಳ ಹಿಂದೆಯೇ ಕಾಲುವೆಗಾಗಿ ಜಮೀನುಗಳನ್ನು ವಶಪಡಿಸಿಕೊಳ್ಳುವ ನೋಟೀಸು ನೀಡಿ ನಂತರ ಗುತ್ತಿಗೆದಾರರು ಅಧಿಕಾರಿಗಳ ಅನುಮತಿ ಪಡೆಯದೆ ಕಾಲುವೆ ಕಾಮಗಾರಿಗಾಗಿ ಜಮೀನುಗಳನ್ನು ಬೇಕಾಬಿಟ್ಟಿ ಅಗೆದಿರುತ್ತಾರೆ. ಸದ್ಯದ ಸ್ಥಿತಿಯಲ್ಲಿ ಕಾಮಗಾರಿಯು ಇಲ್ಲ, ಗುತ್ತಿಗೆದಾರರು ಇಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಸರಕಾರದಿಂದ ಕಾಲುವೆ ಕಾಮಗಾರಿ ಅವಾರ್ಡ್ ಪ್ರತಿಯೂ ಇಲ್ಲ, ಪರಿಹಾರವೂ ಇಲ್ಲ, ಉಳುಮೆ ಮಾಡಲು ಜಮೀನು ಇಲ್ಲದಾಗಿ ಸಂಪೂರ್ಣವಾಗಿ ಹಾಳಾಗಿದ್ದು ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ.
ರೈತರ ಈ ಸಮಸ್ಯೆಗಳ ಬಗ್ಗೆ ದೇವರ ಹಿಪ್ಪರಗಿ ತಾಲ್ಲೂಕಿನ ಎಲ್ಲಾ ರಾಜಕಾರಣಿಗಳು ಮೌನ ವಹಿಸಿರುವುದರಿಂದ ಹಲವಾರು ರೈತರು ಯೋಜನೆಯ ಇಂಡಿ ಕಛೇರಿಗೆ ಅಲೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನಂತರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ೩ ತಿಂಗಳು ಕಾಲಾವಕಾಶ ಪಡೆದು ೩ ತಿಂಗಳುಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಲಿಖಿತವಾಗಿ ಬರೆದು ಕೊಟ್ಟರು. ನಂತರ ರೈತರು ೩ ತಿಂಗಳುಗಳಲ್ಲಿ ಪರಿಹರಿಸದಿದ್ದಲ್ಲಿ ಯೋಜನೆಯ ಇಂಡಿ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಬಸಲಿಂಗಯ್ಯ ಗದ್ಗಿ, ಮಹಿಬೂಬ್ ಖಾಜಿ, ಬಾಬು ಕಂಡೆಕ್ಟರ್, ಪ್ರಭು ಡಿಗ್ಗಾವಿ, ಶಿವು ಮಲ್ಲಾಬಾದಿ, ಈರಣ್ಣ, ಸಾಹೇಬಗೌಡ, ಶಾಂತಗೌಡ, ಶರಣು ಕೊಂಡಗೂಳಿ ಹಾಗೂ ಹಂಚಲಿ ಗ್ರಾಮದ ಹಲವು ರೈತರು ಇದ್ದರು.

