ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೇಸಿಗೆಯಲ್ಲಿ ಜನರಿಗೆ ನೀರು ಒದಗಿಸುವ ಕಾರ್ಯ ಮಾನವೀಯತೆಯ ಪವಿತ್ರ ಸೇವೆಯಾಗಿದೆ ಎಂದು ಬಿಜೆಪಿ ಧುರೀಣ ಬಸನಗೌಡ ಪಾಟೀಲ(ಯಡಿಯಾಪೂರ) ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಭಾನುವಾರ ರೇಣುಕಾಚಾರ್ಯ ಜಯಂತಿ ಅಂಗವಾಗಿ ‘ಸಾರ್ವಜನಿಕರಿಗಾಗಿ ಅರವಟ್ಟಿಗೆ’ ಗೆ ಚಾಲನೆ ನೀಡಿ ಮಾತನಾಡಿದರು. ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಅರವಟ್ಟಿಗೆ ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಕೋಕಟನೂರ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಕುಡಿಯುವ ನೀರನ್ನು ಸಾರ್ವಜನಿಕರಿಗೆ ಪೂರೈಸುವುದರ ಜೊತೆಗೆ ಪಶು, ಪಕ್ಷಿಗಳಿಗೂ ಒದಗಿಸಿ ಮಾನವೀಯತೆ ಮೆರೆಯಲು ಪ್ರತಿಯೊಬ್ಬರು ಮುಂದಾಗಬೇಕು. ತಮ್ಮ ಪ್ರತಿ ಮನೆಯ ಮುಂದಿನ ಗಿಡಗಳಲ್ಲಿ ನೀರು ಇಟ್ಟು ಪಕ್ಷಿಗಳಿಗೆ ನೀರು ಉಣಿಸಿ ಪುಣ್ಯ ಕಟ್ಟಿಕೊಳ್ಳಿ ಎಂದರು.
ಸ್ಥಳೀಯ ಜಡಿಮಠದ ಜಡಿಸಿದ್ದೇಶ್ವರಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಸಂಕ್ಷಿಪ್ತವಾಗಿ ಮಾತನಾಡಿದರು.
ಪಂಚಾಚಾರ್ಯ ಕಲ್ಯಾಣ ಭವನದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ, ಬಂಡೆಪ್ಪ ಬಿರಾದಾರ(ದಿಂಡವಾರ), ಸೋಮಶೇಖರ ಹಿರೇಮಠ, ಸಂಗನಗೌಡ ಪಾಟೀಲ, ರಾಮಯ್ಯ ನಾಶೀಮಠ, ವಿರೇಶ ಮಠಪತಿ ಇದ್ದರು.

