ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಉನ್ನತವಾದ ಸಾಧನೆಯ ನಗೆ ಬೀರಿದ್ದಾಳೆ ಎಂದು ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ಹೇಳಿದರು.
ವಿಜಯಪುರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಹಯೋಗದಲ್ಲಿ ಆಯೋಜಿಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಅಂದು ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದಳು, ಅನೇಕ ಸವಾಲುಗಳನ್ನು ಎದುರಿಸಿ ತನ್ನ ಸ್ವ ಸ್ವಾಮರ್ಥ್ಯದ ಮೇಲೆ ಇಂದು ಎಲ್ಲ ರಂಗದಲ್ಲಿಯೂ ಸಾಧನೆ ತೋರಿದ್ದಾಳೆ, ವಿಮಾನ ನಡೆಸುವ ಜೊತೆಗೆ ಅಂತರಿಕ್ಷ ನೌಕೆಯನ್ನೂ ಸಹ ಸಮರ್ಥವಾಗಿ ಚಲಾಯಿಸುವ ಮಟ್ಟಕ್ಕೆ ಬೆಳೆದಿದ್ದಾಳೆ, ಪ್ರತಿ ಬಾರಿಯ ಫಲಿತಾಂಶದಲ್ಲಿಯೂ ಬಾಲಕಿಯರ ಮೇಲುಗೈ ಸಾಧಿಸುತ್ತಿದ್ದಾರೆ, ತೊಟ್ಟಿಲು ತೂಗುವ ಕೈ ವಿಶ್ವವನ್ನೇ ಆಳಬಲ್ಲದು ಎಂಬುದನ್ನು ನಿರೂಪಿಸಿದ್ದಾಳೆ ಎಂದರು.
ಮುಖ್ಯ ಅತಿಥಿಯಾಗಿದ್ದ ಉಷಾ ಹಿರೇಮಠ ಮಾತನಾಡಿ, ಮಹಿಳೆ ಅಪಾರ ಶಕ್ತಿವಂತಳು, ಕರುಣೆ, ವಾತ್ಸಲ್ಯ ದ ಪ್ರತಿರೂಪ, ಮಹಿಳೆಗೆ ಸಾಧನೆ ತೋರಲು ವೇದಿಕೆ ಬೇಕು, ಯಾವ ಸವಾಲನ್ನು ಆಕೆ ಸಮರ್ಥವಾಗಿ ನಿಭಾಯಿಸುವ ಗಟ್ಟಿತನ ಹೆಣ್ಣಿಗೆ ಇದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಧುರಿ ಪಾಟೀಲ ಮಾತನಾಡಿದರು. ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಪಾಟೀಲ, ವಾಹೀದ ಜಹಾಗೀರದಾರ, ರೇಖಾ ತೋಟಗೇರ, ಶೋಭಾ ಅಹೇರಿಕರ, ಶಿಲ್ಪಾ ಗಮ್ಮ ಪಾಲ್ಗೊಂಡಿದ್ದರು.

