ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಇನ್ನಷ್ಟು ಮುನ್ನಡೆಯಬೇಕು ಎಂದು ತಾಲೂಕು ದಂಡಾಧಿಕಾರಿ ಕರೇಪ್ಪ ಬೆಳ್ಳಿ, ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸ್ಪೂರ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಇವರುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರಗಳು ಮಹಿಳೆಯರ ಏಳಿಗೆಗಾಗಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಅದರ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆದುಕೊಂಡು ಸಬಲರಾಗಬೇಕು ಎಂದರು.
ಸಿಂದಗಿ ನಗರದ ಗೋಲಗೇರಿ ರಸ್ತೆಯಲ್ಲಿರುವ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಸ್ಪೂರ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಸಿಂದಗಿ ಇವರುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ರಶ್ಮಿ ನೂಲಾನವರ ಮಾತನಾಡಿ, ಹೆಣ್ಣು ಮಕ್ಕಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಳೆದು ಸ್ವಾವಲಂಬಿಗಳಾಗಲು ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಸಮಾಜದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಹೆಣ್ಣು ಮಕ್ಕಳು ಶಿಕ್ಷಣ, ಉದ್ಯೋಗ ಮತ್ತು ಸಂಘಟಿತ ಶಕ್ತಿಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ. ಕುಟುಂಬದ ಅಭಿವೃದ್ಧಿಯಿಂದ ಹಿಡಿದು ದೇಶದ ಪ್ರಗತಿವರೆಗೂ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಭಾಗವಹಿಸಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಈ ವೇಳೆ ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿ.ಸಿಂತಿಯಾ ಡಿ.ಮೆಲ್ಲೊ, ಮಾತನಾಡಿ, ಮಹಿಳೆಯರು ಹಕ್ಕು, ನ್ಯಾಯ ಮತ್ತು ಸಮಾನತೆಯ ಪಥದತ್ತ ಧೈರ್ಯವಾಗಿ ಮುನ್ನಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಲಿಂಗ ತಾರತಮ್ಯ ಮಾಡದೆ, ಗಂಡು-ಹೆಣ್ಣು ಸಮಾನವಾಗಿ ಶಿಕ್ಷಣ ಮತ್ತು ಅವಕಾಶಗಳನ್ನು ನೀಡುವುದು ಸಮಾಜದ ಜವಾಬ್ದಾರಿಯಾಗಿದೆ. ಮಹಿಳೆಯರ ಅಭಿವೃದ್ಧಿ ದೇಶದ ಸಮಗ್ರ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತೇಜಸ್ವಿನಿ ಹಳ್ಳದಕೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಲಾ ಸಂಗಮ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಲಕ್ಷ್ಮಿ ಪೊಲೀಸ್‌ಪಾಟೀಲ, ಸರಿತಾ ಹರಿಜನ, ಪಾ.ಸಂತೋಷ ಎಸ್.ಜೆ., ಪಾ.ವಿಶಾಲ್ ಡಿ.ಸೋಜಾ, ಪಾ.ಜೀವನ್ ಡಿ.ಸೋಜಾ, ಪಾ.ಕೇವಿನ್ ಸಿಕ್ವೇರಾ ಇದ್ದರು. ಪ್ರತಿಭಾ ಚಳ್ಳಗಿ ನಿರೂಪಿಸಿದರು. ನೀಲ್ಲಮ್ಮ ಬಡಿಗೇರ ಸ್ವಾಗತಿಸಿದರು. ಭಾಗ್ಯಶ್ರೀ ಬಿರಾದಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಗಳಿಂದ ೫೦೦ಕ್ಕೂ ಅಧಿಕ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು, ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.

