ಮುದ್ದೇಬಿಹಾಳದ ಬಾಗವಾನ ಯುವಕರ ಸಂಘದಿಂದ ಇಫ್ತಿಯಾರ ಕೂಟ
ಮುದ್ದೇಬಿಹಾಳ : ಬದುಕಿನಲ್ಲಿ ಯಾರಿಗೂ ನೋವು ಮಾಡದೇ ಎಲ್ಲರನ್ನೂ ಪ್ರೀತಿಸುವ ಸದ್ಭುದ್ದಿಯ ನಾಲಿಗೆ ಯಾರಲ್ಲಿ ಇರುತ್ತದೆಯೋ ಅವನು ದೊಡ್ಡವನು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಹೇಳಿದರು.
ಪಟ್ಟಣದ ಭಾರಪೇಟ್ ಗಲ್ಲಿಯಲ್ಲಿ ಬಾಗವಾನ್ ಜಮಾಅತ್ ಮತ್ತು ಬಾಗವಾನ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರವಾದಿ ಮೊಹಮ್ಮದರು ಹೇಳಿದಂತೆ, ನಾವು ಊಟ ಮಾಡುವದಕ್ಕಿಂತ ನಮ್ಮ ಮನೆಗೆ ಬಂದ ಅತಿಥಿಯನ್ನು ಮೊದಲು ಉಣಬಡಿಸುವದು ದೊಡ್ಡ ಗುಣ. ಇನ್ನೊಬ್ಬರನ್ನು ಪ್ರೀತಿಸುವ ವಾತ್ಸಲ್ಯದಿಂದ ನೋಡುವ ಗುಣ ನಮ್ಮಲ್ಲಿ ಇಲ್ಲದಿದ್ದರೆ ನಾವು ಯಾವ ಧರ್ಮ ಆಚರಿಸಿದರೂ ಅದು ದೊಡ್ಡದಾಗುವದಿಲ್ಲ. ಅಂಥವರು ದೊಡ್ಡವರು ಎನಿಸಿಕೊಳ್ಳುವದಿಲ್ಲ ಎಂದರು.
ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಉಪವಾಸ ಮಾಡುವದರಿಂದ ದೇಹದ ಎಲ್ಲ ಅಂಗಾAಗಗಳೂ ಶುದ್ಧವಾಗುತ್ತವೆ. ಉಪವಾಸ ಎಲ್ಲ ಧರ್ಮದಲ್ಲಿಯೂ ಇದೆ ಆದರೆ ಆಚರಣೆ ಮಾತ್ರ ಬೇರೆ ಬೇರೆಯಾಗಿದೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಉಪವಾಸ ಮಾಡುವದರಿಂದ ಮಾನಸಿಕ ಧೃಢತೆ ಹೆಚ್ಚುವದು ಮಾತ್ರವಲ್ಲದೇ, ಆರೋಗ್ಯವಂತರಾಗಿರುತ್ತೇವೆ ಎಂದರು.
ಎಪಿಎAಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿದರು. ಮೌಲಾನಾ ಮಹ್ಮದ ಹುಸೇನ ಉಮ್ರಿ ಸಾನಿಧ್ಯ ವಹಿಸಿದ್ದರು. ಜಗದೀಶ ಪಂಪಣ್ಣನವರ, ಸಮಾಜ ಸೇವಕ ಅಯ್ಯೂಬ್ ಮನಿಯಾರ, ಉದ್ಯಮಿ ಬಸವರಾಜ ಮೋಟಗಿ, ನಿವೃತ್ತ ಪ್ರಾಂಶುಪಾಲರಾದ ಎಸ್.ಜಿ.ನಂದಿ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ. ಅಲ್ಲಾಭಕ್ಷ ಢವಳಗಿ ಸೇರಿದಂತೆ ಇತರರು ಇದ್ದರು. ಅಂಜುಮನ್ ಎ ಇಸ್ಲಾಂ ಕಮೀಟಿಯ ಸಲಹಾ ಸದಸ್ಯ ಎಚ್.ಆರ್.ಬಾಗವಾನ ಕಾರ್ಯಕ್ರಮ ನಿರ್ವಹಿಸಿದರು.