ಮುದ್ದೇಬಿಹಾಳ: ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮತ್ತು ಒಳಮೀಸಲಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ಬಂಜಾರಾ, ಕೊರಚ, ಕೊರಮ ಸಮಾಜ ಬಾಂಧವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ರೇಖಾ ಟಿ ಅವರ ಮೂಲಕ ರಾಜ್ಯಪಾಲರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಸಂತ ಸೇವಾಲಾಲ್ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಛೇರಿಯವರೆಗೂ ಸಾಗಿತು. ಮೆರವಣಿಗೆಯ ಉದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ ಕಛೇರಿಯ ವರೆಗೂ ಸಾಗಿತು.
ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಹದ್ದೂರ ರಾಠೋಡ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಲು ಬರುವದಿಲ್ಲ ಎಂದು ಸುಪ್ರೀಂ ಕೋರ್ಟ ನಿರ್ದೇಶನ ನೀಡಿದರೂ, ಚುನಾವಣಾ ಹಿನ್ನೆಲೆಯಲ್ಲಿ ಮತಗಳÀ ಆಸೆಗಾಗಿ ರಾಜ್ಯ ಸರ್ಕಾರ ಇಂಥಹ ಕಾನೂನು ಬಾಹಿರ ನಿಲುವನ್ನು ತೆಗೆದುಕೊಂಡಿದೆ. ಬರುವ ಚುನಾವಣೆಯಲ್ಲಿ ಬಂಜಾರಾ ಸೇರಿದಂತೆ ಭೋವಿ, ಕೊಂಚ ಕೊರಮ ಸಮಾಜದವರು ತಕ್ಕ ಪಾಠ ಕಲಿಸಲಿಕ್ಕೆ ಸಜ್ಜಾಗಿದ್ದಾರೆ ಎಂದರು.
ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರವಿ ನಾಯಕ ಮಾತನಾಡಿ, ಅಲೆಮಾರಿ ಜನಾಂಗದವರಾದ ನಮ್ಮನ್ನು ಮತ್ತೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂತೆ ಸಂಚು ರೂಪಿಸಿ, ರಾಜಕೀಯ ಹಿತಾಸಕ್ತಿಯಿಂದ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನ ಬಲಿಪಶು ಮಾಡಿರುವ ಬಸವರಾಜ ಬೊಮ್ಮಾಯಿ ಸರ್ಕಾರ ಸಹೋದರ ಭಾವನೆಯಿಂದ ಬದುಕುತ್ತಿರುವ ಎಲ್ಲ ಸಮಾಜ ಬಾಂಧವರ ಮಧ್ಯೆ ವಿಷದ ಬೀಜವನ್ನು ಬಿತ್ತಿದ್ದಾರೆ. ನಮ್ಮ ಸಮುದಾಯದ ಶಾಸಕರಾದ ಪಿ.ರಾಜೀವ, ಪ್ರಭು ಚೌವ್ಹಾನ, ಉಮೆಶ ಜಾಧವ ಅವರು ನಮ್ಮ ಸಮಾಜವನ್ನು ಚಿತ್ರಹಿಂಸೆ ಮಾಡಿ ಬೀದಿಗೆ ತಂದು ನಿಲ್ಲಿಸಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ ಇವರಿಗಿಲ್ಲ. ಗುಲಾಮರಾಬಿಟ್ಟಿದ್ದಾರೆ. ಇವರುಗಳು ಸಂತ ಸೇವಾಲಾಲ್ ವಂಶಕ್ಕೆ ಹುಟ್ಟಿದ್ದು ಸಾಥÀðಕವಾಗಲಿಲ್ಲ. ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಕ್ರೋಶಭರಿತವಾಗಿ ಹೇಳಿದರು.
ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ನಾನಪ್ಪ ನಾಯಕ, ಮಾಜಿ ಜಿ.ಪಂ ಅಧ್ಯಕ್ಷ ಅರ್ಜುನ ರಾಠೋಡ್ ಮುಖಂಡರಾದ ಶಂಕರ ಚೌವ್ಹಾಣ, ರಾಜು ಜಾಧವ, ಎಸ್.ಪಿ.ಸೇವಾಲಾಲ್, ತಾವರೆಪ್ಪ ಜಾಧವ, ಸಂತೋಷ ಚೌವ್ಹಾಣ, ಆರ್.ವಿ.ಲಮಾಣಿ ಮಾತನಾಡಿ, ಬಿಜೆಪಿ ಸರ್ಕಾರ ನಿರಂತರವಾಗಿ ತಾರತಮ್ಯ ಮಾಡುತ್ತಲೇ ಬಂದಿದೆ. ಇದು ಜನಾಂಗೀಯ ದ್ವೇಶ ಹುಟ್ಟಿಸುವಂತಹ ಬೆಳವಣಿಗೆಯಾಗಿದೆ. ಇನ್ನೂ ಹಿಂದುಳಿದ ಸಮಾಜವಾದ ಬಂಜಾರಾ ಸಮಾಜಕ್ಕೆ ಬೊಮ್ಮಾಯಿ ಸರ್ಕಾರ ಘೋರ ಅನ್ಯಾಯವನ್ನು ಮಾಡಿದೆ. ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸಮಾಜ ಬಾಂಧವರು ತಕ್ಕ ಉತ್ತರ ನೀಡುತ್ತಾರೆ ಎಂದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಘಟಕದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದೇ ವೇಳೆ ತಾಲೂಕು ಕೊರಮ(ಭಜಂತ್ರಿ) ಸಂಘದ ವತಿಯಿಂದ ಪ್ರತಯೇಕ ಮನವಿ ಸಲ್ಲಿಸಲಾಯಿತು. ಈ ವೇಳೆ ಗ್ರಾ.ಪಂ ಸದಸ್ಯ ಕೃಷ್ಣಪ್ಪ ಚೌವ್ಹಾಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಬದ್ರಪ್ಪ ಲಮಾಣಿ, ಅಶೋಕ ರಾಠೋಡ, ಅರ್ಜುನ ರಾಠೋಡ, ರಾಜು ನಾಯಕ, ಸಚೀನ ಪವಾರ, ಅರವಿಂದ ಚೌವ್ಹಾಣ, ವಾಮನರಾವ ಲಮಾಣಿ, ಬಸವರಾಜ ಚಿಂತಾಮಣಿ, ದ್ಯಾಮಣ್ಣ ಭಜಂತ್ರಿ, ಸಂಗಪ್ಪ ಭಜಂತ್ರಿ, ಚಂದ್ರಶೇಖರ ಭಜಂತ್ರಿ, ಗುಂಡಪ್ಪ ಭಜಂತ್ರಿ, ಹಣಂಮAತ ಭಜಂತ್ರಿ, ಅಶೋಕ ಭಜಂತ್ರಿ ಸೇರಿದಂತೆ ಮತ್ತೀತರರು ಇದ್ದರು.
ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿಯನ್ನು ೨೦೨೦ ರಲ್ಲಿ ಆಗಿನ ಸಮಾಜ ಕಲ್ಯಾಣ ಸಚೀವ ನಾರಾಯಣಸ್ವಾಮಿಯವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಅವೈಜ್ಞಾನಿಕವಾಗಿದೆ ಮತ್ತು ಕಾನೂನುಬಾಹಿರವಾಗಿದೆ ಎಂದು ಈಗಾಗಲೇ ಹೋರಾಟ ಮಾಡಲಾಗಿದೆ. ಮತ್ತು ಈ ಕುರಿತು ೨೦೨೦ ರಲ್ಲಿ ಸುಮಾರು ೧೭ ಲಕ್ಷ ಜನ ಪತ್ರ ಚಳುವಳಿ ಮಾಡಿ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರತದ ಸಂವಿದಾನದಲ್ಲಿ ಅವಕಾಶವಿಲ್ಲದ ಹಾಗೂ ಸರ್ವೋಚ್ಛ ನ್ಯಾಯಾಲಯದ ವಿರುದ್ಧವಾದ ಪ.ಜಾತಿಯಲ್ಲಿಯೇ ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿ ಮೀಸಲಾತಿಯನ್ನು ಹಂಚಿಕೆ ಮಾಡಿ ಭಿನ್ನಾಭಿಪ್ರಾಯ ಮೂಡಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ತಡೆಹಿಡಿದು ಒಳಮೀಸಲಾತಿ ಬಗ್ಗೆ ಬಹಿರಂಗ ಚರ್ಚೆ ಮತ್ತು ಅಸೆಂಬ್ಲಿಯಲ್ಲಿ ಇದರ ಸಾಧಕ-ಬಾಧಕದ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿ ಕೊಡುವಂತೆ ಎರಡೂ ಮನವಿ ಪತ್ರಗಳಲ್ಲಿ ವಿನಂತಿಸಲಾಗಿದೆ.