ಜನರ ಮೇಲೆ ಹೊರೆ ಆಗುವ ಮೊದಲು ವಿಧಾನಸಭೆ ವಿಸರ್ಜಿಸಲು ಸಿಎಂಗೆ ಶಾಸಕ ಯತ್ನಾಳ ಸಲಹೆ
ವಿಜಯಪುರ: ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ಭ್ರಷ್ಟಾಚಾರ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಶನಿವಾರ ಬಿಜೆಪಿ ನಗರ ಮಂಡಲ ವತಿಯಿಂದ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಮನಗೂಳಿ ರಿಂಗ್ ರೋಡ್ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಹೆದ್ದಾರಿ ತಡೆದು ಜನರಿಗೆ ಬೆಲೆ ಏರಿಕೆ ಬರೆ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ತೈಲ್ ಬೆಲೆ ಏರಿಸಿ ಲೂಟಿಗೆ ಇಳಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆ ಕೂಗಿದರು. ನಂತರ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಹುಟ್ಟಿದವರ & ಸತ್ತವರ ಪ್ರಮಾಣ ಪತ್ರ ಉಚಿತವಾಗಿ ನೀಡಬೇಕು. ಆದರೆ, ಈ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ಮೊತ್ತ ಕೂಡ ಹೆಚ್ಚಿಗೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಬ್ರಿಟಿಷರು ಉಪ್ಪಿನ ಮೇಲೆ ಟ್ಯಾಕ್ಸ್ ಹಾಕಿದಂತೆ, ಇಂದಿನ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಲಿವೆ. ಈ ರೀತಿ ಬೆಲೆ ಏರಿಕೆ ಮೂಲಕ ಸರ್ಕಾರ ಹಗಲು ದರೋಡೆ ನಡೆಸಿದೆ. ಇದರಿಂದ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಕೂಡಲೇ ಇಂಧನ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ತಮ್ಮ ಸ್ವಾರ್ಥಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳೆಲ್ಲ ಸಂಪೂರ್ಣ ವಿಫಲವಾಗಿವೆ. ಅಕ್ಕಿ ಬದಲಾಗಿ ಸರಿಯಾಗಿ ಹಣ ನೀಡುತ್ತಿಲ್ಲ. ಬಸ್ ಗಳಲ್ಲಿ ದಿನಾಲು ಸೀಟಿಗಾಗಿ ಹೊಡೆದಾಟ ಸಾಮಾನ್ಯವಾಗಿದೆ. ಇದರಿಂದ ಸಿದ್ದರಾಮಯ್ಯನವರ ಅರ್ಥಶಾಸ್ತ್ರ ಸಂಪೂರ್ಣ ವಿಫಲವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ರಾಜ್ಯದ ಖಜಾನೆ ಖಾಲಿಗೆ ಆಗಿದ್ದು, ಗ್ಯಾರಂಟಿಗಳನ್ನು ಏಕಾಏಕಿ ತೆಗೆದು ಹಾಕಿದರೆ ಎಲ್ಲಾ ಜನ ಛೀಮಾರಿ ಹಾಕುತ್ತಾರೆ ಎಂಬ ಭಯ ಕಾಡುತ್ತಿದೆ. ಹೀಗಾಗಿ ಮುಂದುವರೆಸುವ ನಾಟಕ ನಡೆಸಿದ್ದು, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಮಂತ್ರಿಯ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಂತ್ರಿಗಳು ಸೇರಿ ಕೊಟ್ಯಂತರ ಬೆಲೆಬಾಳುವ ೧೩ ಎಕರೆ ಸರ್ಕಾರಿ ಭೂಮಿಯನ್ನು ಕೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಬಳಿಸಿದ್ದಾರೆ. ಬಾಗಿಯಾದ ಅಧಿಕಾರಿಗಳನ್ನು ಅಮಾನತ್ತುಗೊಳಿಸಲು ವರದಿ ನೀಡಿದರೂ ಸಹ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದರೆ, ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿಗಳು ಆಗುತ್ತಾರೆ. ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಹೀಗೆಯೇ ರಾಜ್ಯದ ಸಕ್ಕರೆ ಮಂತ್ರಿ ಸೇರಿ, ಕಾಂಗ್ರೆಸ್‌ನ ಮಂತ್ರಿಗಳು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸ್.ಸಿ-ಎಸ್.ಟಿ ಸಮುದಾಯದ ೨೯ ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಹಾಕಿದರು. ಇದರಿಂದ ಆ ಸಮುದಾಯದ ಯೋಜನೆಗಳು ಬಂದಾಗಿವೆ. ವಾಲ್ಮೀಕಿ ನಿಗಮದ ರೂ.೧೮೭ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಇಂತವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಆಗುತ್ತೆಂದು ಹೇಳುತ್ತಾರೆ. ನಾವು ಸಂವಿಧಾನ ಬದಲಾಯಿಸಲು ಬಂದಿಲ್ಲ, ಸೂರ್ಯ ಚಂದ್ರ ಇರುವವರೆಗೂ ಡಾ.ಅಂಬೇಡ್ಕರ್ ಬರದಿರುವ ಸಂವಿಧಾನ ಇರಲಿದೆ. ದಲಿತರ ಉದ್ದಾರ, ಅಂಬೇಡ್ಕರ್ ಕಂಡ ಭಾರತ ಕನಸು ನನಸು ಮಾಡುತ್ತೇವೆ. ನಮಗೆ ನೆಹರು ಕಂಡಂತ ಭಾರತ ಬೇಡ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ.ಎಸ್.ಪಾಟೀಲ ಕೂಚಬಾಳ, ಕಾಂಗ್ರೆಸ್ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದೆ. ಸದಾ ಒಂದಿಲ್ಲೊಂದರ ದರ ಏರಿಕೆ ಮಾಡಿ, ಲೂಟಿಗೆ ಇಳಿದೆ ಎಂದು ದೂರಿದರು.
ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ.ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ರಾಜಶೇಖರ ಕುರಿಯವರ, ಮಲ್ಲಿಕಾರ್ಜುನ ಗಡಗಿ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಜವಾಹಾರ ಗೋಸಾವಿ, ಸ್ವಪ್ನಾ ಕಣಮುಚನಾಳ, ಪ್ರಮುಖರಾದ ರಾಜೇಶ ದೇವಗಿರಿ, ಪಾಮಡುಸಾಹುಕಾರ ದೊಡಮನಿ, ವಿಕ್ರಮ ಗಾಯಕವಾಡ, ಮಡಿವಾಳ ಯಾಳವಾರ, ಅಶೋಕ ಬೆಲ್ಲದ, ರಾಜಶೇಖರ ಭಜಂತ್ರಿ, ಚಂದ್ರು ಚೌದರಿ, ಶರಣು ಕಾಖಂಡಕಿ, ದಾದಾಸಾಹೇಬ ಬಾಗಾಯತ, ರಾಜಶೇಖರ ಭಜಂತ್ರಿ, ದತ್ತಾ ಗುನ್ನಾಳಕರ, ವಿಜಯ ಜೋಶಿ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಧಾನಮಂತ್ರಿಗಳಿಗೆ ಪತ್ರ
ನೆಹರು ಈ ದೇಶಕ್ಕೆ ಮಾಡಿರುವ ಬಹುದೊಡ್ಡ ಮೋಸವೆಂದರೆ, ನಮ್ಮ ದೇಶದ ಸುಮಾರು ೧೨ ಲಕ್ಷ ಎಕರೆ ವಕ್ಪ ಆಸ್ತಿ ಮಾಡಿದ್ದಾನೆ. ಇಂಡಿಯನ್ ಆರ್ಮಿ, ರೈಲ್ವೆ ಇಲಾಖೆ ನಂತರ ಅತೀ ಹೆಚ್ಚು ಆಸ್ತಿ ವಕ್ಪ ಆಗಿದೆ. ನಿಮ್ಮೆಲ್ಲರ ಆಸ್ತಿ ವಕ್ಪ ಅಂದರೆ, ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ. ವಕ್ಪ ಕೋರ್ಟಗೆ ಹೋಗಬೇಕು. ಅಲ್ಲಿ ಎಲ್ಲರೂ ಸಾಬರೇ ಇರುತ್ತಾರೆ. ದೇಶದಲ್ಲಿ ವಕ್ಪ ಆಸ್ತಿಯನ್ನು ಮರಳಿ ಸರ್ಕಾರಕ್ಕೆ ಪಡೆದು, ದಲಿತರು, ಹಿಂದುಳಿದವರಿಗೆ ಮನೆ ನಿರ್ಮಿಸಿಕೊಡಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಯತ್ನಾಳ ಹೇಳಿದರು.

