ವಿಜಯಪುರ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆ ಮೇಲೆ ತ್ವರಿತವಾಗಿ ಇತ್ಯರ್ಥಗೊಳಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಪ್ರಕರಣಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು. ದೌರ್ಜನ್ಯ ಪ್ರಕರಣಗಳ ಪರಿಹಾರ ಧನವನ್ನು ಆದ್ಯತೆ ಮೇಲೆ ಸಂತ್ರಸ್ತರಿಗೆ ಬಿಡುಗಡೆ ಮಾಡಲು ಕ್ರಮ ವಹಿಸಬೇಕು. ನಿಯಮಾನುಸಾರ ಹಾಗೂ ಪ್ರಕರಣಾನುಸಾರ ಕಾಲಮಿತಿಯೊಳಗೆ ಪರಿಹಾರ ಧನ ಒದಗಿಸಬೇಕು. ಯಾವುದೇ ಬಾಕಿ ಉಳಿಸಿಕೊಳ್ಳದಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ನಿಗಮಗಳು ಭೂ ಒಡೆತನ ಯೋಜನೆಯಡಿಯ ಫಲಾನುಭವಿಗಳಲ್ಲಿರುವ ದಾಖಲೆಗಳೊಂದಿಗೆ ಸರಿ ಹೊಂದಿಸಿಕೊಂಡು, ನಿಯಮಾನುಸಾರ ಕ್ರಮವಹಿಸಿ,ಅಧಿಕಾರಿಗಳು ಸಮನ್ವಯ ಸಾಧಿಸಿ, ಆದ್ಯತೆಯ ಮೇಲೆ ಕ್ರಮವಹಿಸಲು ಅವರು ಸೂಚನೆ ನೀಡಿದರು.
ಅಸ್ಪಶ್ಯತಾ ನಿವಾರಣಾ ಜಾಗೃತಿ ಸಭೆಗಳನ್ನು ಕಾಲಕಾಲಕ್ಕೆ ಆಯೋಜಿಸುವ ಮೂಲಕ ಜಾಗೃತಿ ಮೂಡಿಸುವಂತೆ ಅಭಿಷೇಕ ಚಕ್ರವರ್ತಿ ಸಭೆಗೆ ತಿಳಿಸಿದರು.
ವಸತಿ ಶಾಲೆಗಳಲ್ಲೂ ನಿರಂತರ ಪಾಲಕರ ಸಭೆ ಏರ್ಪಡಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬ ಮಾಡದೇ ಪರಿಹಾರ ಒದಗಿಸಬೇಕು. ವಸತಿ ನಿಲಯಗಳ ಹತ್ತಿರ ಮದ್ಯ ಮಾರಾಟ ಕಡಿವಾಣ ಹಾಕುವಂತೆ ಸದಸ್ಯರು ಮನವಿ ಮಾಡಿಕೊಡರು.
ಎಸ್ಸಿ-ಎಸ್ಟಿ ಕಾಯ್ದೆಯಡಿ ಜಿಲ್ಲೆಯಲ್ಲಿ ಕಳೆದ ಜನವರಿ ೨೦೨೫ ರಿಂದ ನವೆಂಬರ್-೨೦೨೫ರವರೆಗೆ ದಾಖಲಾದ ೯೨ ಪ್ರಕರಣಗಳ ಪೈಕಿ ೭ ಸುಳ್ಳು ವರದಿಯಾದ ಪ್ರಕರಣಗಳಾಗಿದ್ದು,೬೫ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು,೦೨ ಪ್ರಕರಣಗಳು ತನಿಖೆಯಲ್ಲಿವೆ.೧೬ ಪ್ರಕರಣಗಳು ವರ್ಗಾವಣೆ ಪ್ರಕರಣಗಳಾಗಿವೆ.೦೨ ಕೈಬಿಟ್ಟ ಪ್ರಕರಣಗಳಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಾಗೇವಾಡಿ ಡಿವೈ ಎಸ್ ಪಿ ಬಲ್ಲಪ್ಪ ನಂದಗಾವಿ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ್, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಸರ್ಕಾರಿ ಅಭಿಯೋಜಕರಾದ ಎಚ್.ಜಿ.ಮುಲ್ಲಾ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳಾದ ಬಂದಗಿ ಸಿದ್ದಪ್ಪ ಗಸ್ತಿ, ಯಮನಪ್ಪ ಸಿದರಡ್ಡಿ, ಮಲ್ಲು ತಳವಾರ, ಮದನಕುಮಾರ ನಾಗರದಿನ್ನಿ, ಮಹಾಂತೇಶ ಸಾಸಬಾಳ, ರಾಜಶೇಖರ ಚೌರ, ನಾನು ಸೋಮು ಲಮಾಣಿ, ರವಿಕಾಂತ ಬಿರಾದಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

