ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ವಾಣಿಜ್ಯ ಮಳಿಗೆಯಲ್ಲಿರುವ ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹಿಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ ಕಚೇರಿ ಮುಂಭಾಗ ಮಂಗಳವಾರ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಮಾರಾಟದ ನೋಂದಣಿ ಮಾಡಲು ಅಪಾರ ಸಂಖ್ಯೆಯ ರೈತರು ಸರದಿಯಲ್ಲಿ ನಿಂತಿರುವದು ಕಂಡುಬಂದಿತ್ತು.
ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾರಾಟ ಕೇಂದ್ರದಲ್ಲಿ ಇಂದು ನೋಂದಣಿ ಆರಂಭವಾಗುತ್ತಿದ್ದ ವಿಷಯ ಅರಿತ ರೈತ ಬಾಂಧವರು ಈ ಕಚೇರಿ ಮುಂಭಾಗ ಸೋಮವಾರ ರಾತ್ರಿಯಿಂದಲೇ ಠಿಕಾಣಿ ಹೂಡಿದ್ದರು. ಬೆಳಗ್ಗೆ 8.30 ಗಂಟೆಗೆ ಆರಂಭ ನೋಂದಣಿ ಆರಂಭವಾಗುವ ಮುನ್ನ ಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆ ರೈತ ಬಾಂಧವರು ಸರದಿಯಲ್ಲಿ ತಾ ಮುಂದು, ನಾ ಮುಂದು ಎಂದು ಗದ್ದಲ ಆರಂಭಿಸಿದರು. ಇದನ್ನು ಅರಿತ ಪೊಲೀಸ್ ಸಿಬ್ಬಂದಿಗಳು ರೈತರನ್ನು ಸರದಿಯಲ್ಲಿ ನಿಲ್ಲುವಂತೆ ಕ್ರಮ ಕೈಗೊಂಡರು.
ಮಧ್ಯಾನ್ಹದವರೆಗೂ ರೈತರ ಸರದಿಯಲ್ಲಿ ನಿಂತು 112 ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡರು.
ತಾಲೂಕಿಗೆ ಒಟ್ಟು 4,520 ಕ್ವಿಂಟಾಲೆ ಮೆಕ್ಕೆಜೋಳ ಖರೀದಿ ಮಾಡಲು ಅವಕಾಶ ಇದೆ. ಇಂದು 112 ರೈತರಿಂದ ಈ ಗುರಿ ಮುಟ್ಟಲಾಗಿದೆ. ಇಂದು ರೈತರು ನೋಂದಣಿ ಮಾಡಿಸಿದ್ದಾರೆ. ಸರ್ಕಾರ ಯಾವಾಗ ಖರೀದಿ ಮಾಡಬೇಕೆಂದು ಸೂಚನೆ ನೀಡುತ್ತದೆಯೋ ಆಗ ರೈತರಿಗೆ ಮಾಹಿತಿ ನೀಡಿ ಅವರಿಂದ ಮೆಕ್ಕೆಜೋಳ ಖರೀದಿಸಲಾಗುವದು. ಇಂದು ಹೆಚ್ಚುವರಿಯಾಗಿ 300 ರೈತ ಬಾಂಧವರು ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿಸಲು ಬಂದಿದ್ದರು. ತಹಸೀಲ್ದಾರ ನಿರ್ದೇಶನ ಮೇರೆಗೆ ಅವರ ಆಧಾರ ಕಾರ್ಡ್ ಪಡೆದುಕೊಂಡು ಸರದಿ ಸಂಖ್ಯೆ ಹಾಕಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಮೆಕ್ಕೆಜೋಳ ಖರೀದಿ ಮಾಡಿಕೊಳ್ಳುವ ಅವಕಾಶ ಬಂದರೆ ಈ ರೈತರಿಗೆ ಆದ್ಯತೆ ನೀಡಲಾಗುವದು ಎಂದು ಬಸವನಬಾಗೇವಾಡಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದರು.
ತಾಲೂಕಿನ ಟಕ್ಕಳಕಿ ರೈತರಾದ ಯಲ್ಲಪ್ಪ ಬಂಚೋಡಿ, ಸಾಬು ಪೂಜಾರಿ ಅವರು ನಾವು ನಮ್ಮ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ಬೆಂಬಲ ಬೆಲೆ ರೂ.2400 ರಲ್ಲಿ ಮಾರಾಟ ಮಾಡಲು ಇಲ್ಲಿಗೆ ನೋಂದಣಿ ಮಾಡಿಸಲು ಬಂದಿದ್ದೇವೆ. ಹೊರಗಡೆ ಮೆಕ್ಕೆಜೋಳಕ್ಕೆ ಬೆಲೆ ಕಡಿಮೆಯಿದೆ ಎಂದು ಹೇಳಿದರು.
ರೈತರಾದ ಬಸವರಾಜ ಗೊಳಸಂಗಿ, ಸಚೀನ ಹಾರಿವಾಳ, ಸಂತೋಷ ಕೂಡಗಿ ಸೇರಿದಂತೆ ಅನೇಕರು ನೋಂದಣಿ ಮಾಡಿಸಲು ಸೋಮವಾರ ರಾತ್ರಿಯೇ ಈ ಕೇಂದ್ರದ ಮುಂದೆ ಮಲಗಿಕೊಂಡಿದ್ದರು ಎಂದು ಬಾಪೂಜಿ ಗೊಳಸಂಗಿ ಹೇಳಿದರು.
ರೈತ ಶ್ರೀಶೈಲ ಮನಗೂಳಿ ಅವರು ನಾನು 100 ಕಟ್ಟಾ ಮೆಕ್ಕೆಜೋಳ ಬೆಳೆದಿದ್ದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಯಾವಾಗ ಖರೀದಿ ಮಾಡುತ್ತದೆ ಎಂಬುವದು ಗೊತ್ತಾಗಲಿಲ್ಲ. ಸರ್ಕಾರ ರೂ.2400 ಬೆಂಬಲ ಬೆಲೆ ನಿಗದಿ ಪಡಿಸಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಕಡಿಮೆಯಿದೆ. ನಾನು 2-3 ದಿನಗಳ ಹಿಂದೆ ರೂ.1950 ಗೆ ಮೆಕ್ಕೆಜೋಳವನ್ನು ಹೊರಗಡೆ ಮಾರಾಟ ಮಾಡಿದ್ದೇನೆ. ನಾನು 50 ಕ್ವಿಂಟಾಲ್ ಮಾರಾಟ ಮಾಡಿದ್ದೇನೆ. ಇಂದು ಮೆಕ್ಕೆಜೋಳ ಬೆಲೆ ಕಡಿಮೆಯಾಗಿದೆ ಎಂದು ಹೇಳಿದರು.
ಎಎಸ್ಐ ಎಸ್.ವೈ.ಕುಪ್ಪೆಗೌಡರ ನೇತೃತ್ವದಲ್ಲಿ 5-6 ಪೊಲೀಸ್ ಸಿಬ್ಬಂದಿಗಳು ರೈತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.

