ವಿಜಯಪುರದ ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ಸನ್ನಿವೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಯಶಸ್ವಿಯಾಗುವುದಕ್ಕೆ ಆಧ್ಯಾತ್ಮಿಕ ಸಾಧನೆಯು ಅತ್ಯಂತ ಸಹಾಯಕಾರಿಯಾಗಿದೆ ಎಂದು ಬೆಳಗಾವಿಯ ರಾಮಕೃಷ್ಣ ಮಿಶನ ಆಶ್ರಮದ ಪರಮ ಪೂಜ್ಯ ಮೋಕ್ಷಾತ್ಮಾನಂದಜಿ ಮಹಾರಾಜ್ ಹೇಳಿದರು.
ನಗರದ ಎಕ್ಸಲಂಟ್ ಪ. ಪೂ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ಅವರು; ವಿವೇಕವೆಂದರೆ ಮಾತೃತ್ವ, ಭ್ರಾತೃತ್ವ ಹಾಗೂ ಸಮಾನತೆಯ ತತ್ವವಾಗಿದೆ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡ ನರೇಂದ್ರರು ಸ್ವಾಮಿ ವಿವೇಕಾನಂದರಾದರು. ಹೀಗಾಗಿ ವಿದ್ಯಾರ್ಥಿಯಲ್ಲಿಯ ವಿವೇಕ ಜಾಗೃತವಾದರೆ ಅವರೂ ಸಹ ವಿವೇಕಾನಂದರಾಗಬಹುದು. ಅದಕ್ಕಾಗಿ ಏಕಾಗ್ರತೆಯನ್ನು ಸಾಧಿಸಬೇಕು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಾಡುವ ಕಾರ್ಯವನ್ನು ಪರಿಪೂರ್ಣ ಹಾಗೂ ದೋಷರಹಿತವಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಆಧ್ಯಾತ್ಮಿಕ ಸಾಧನೆಯು ನೆರವಾಗುತ್ತದೆ. ನಿರಂತರ ಧ್ಯಾನದಿಂದ ನಿತ್ಯವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿಯೆ ಉದ್ದಿಮೆದಾರರು ಆಧ್ಯಾತ್ಮಿಕ ಸಾಧನೆಯನ್ನು ಅಳವಡಿಸಿಕೊಂಡು ಯಶಸ್ವಿ ಉದ್ದಿಮೆದಾರರಾಗಿ ಬೆಳೆದಿದ್ದಾರೆ. ಅದೇ ರೀತಿಯಲ್ಲಿಯೇ ವಿದ್ಯಾರ್ಥಿ ಜೀವನದಲ್ಲಿಯೂ ಒಂದಷ್ಟು ಆಧ್ಯಾತ್ಮಿಕ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಬಹುದು. ಹಾಗೂ ನಿರ್ಧಿಷ್ಟ ಗುರಿಯ ಕಡೆಗೆ ಪಯಣ ಬೆಳೆಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ದೇಶದ ಆಸ್ತಿಯಾಗಿ ಪರಿವರ್ತನೆಯಾಗುತ್ತಾರೆ. ಹೀಗಾಗಿ ಶಿಕ್ಷಣದಲ್ಲಿ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಮೌಲ್ಯವನ್ನು ಬಿತ್ತಬೇಕು ಎಂದು ಹೇಳಿದರು.
ಖ್ಯಾತ ಹೊಟೇಲ್ ಉದ್ದಿಮೆದಾರರಾದ ಶಾಂತೇಶ ಕಳಸಗೊಂಡ, ಭಾರತೀಯ ಶಿಕ್ಷಣ ಮಂಡಳದ ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಗುಡ್ಡದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ ಪ್ರಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ವಿಭಾಗದ ಮುಖ್ಯಸ್ಥ ಶ್ರದ್ಧಾ ಜಾಧವ ಹಾಗೂ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.
ವಿದ್ಯಾರ್ಥಿ ಸಾಹಿಲ್ ಬನಸೂಡೆ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ವಂದಿಸಿದರು.

